ನಾಪೋಕ್ಲು, ನ. ೭: ಮೂಲಭೂತ ಸೌಕರ್ಯಗಳನ್ನು ಯಾವುದೇ ತಾರತಮ್ಯ ಇಲ್ಲದೆ ಸಾರ್ವಜನಿಕರಿಗೆ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕರು ಆಗಿರುವ ಎ.ಎಸ್. ಪೊನ್ನಣ್ಣ ಹೇಳಿದರು.

ಕುಂಜಿಲ ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ ಹಾಗೂ ಕುಂಜಿಲ ಬ್ಲಾಕ್ ಕಾಂಗ್ರೆಸ್ ಪಕ್ಷದ ಜಂಟಿ ಆಶ್ರಯದಲ್ಲಿ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಯ್‌ನರಿ ಮಸ್ಜಿದ್ ಹಾಗೂ ಸ್ಮಶಾನ ಸುತ್ತ ತಡೆಗೋಡೆಗೆ ಅನುದಾನ ಬಿಡುಗಡೆಗೆ ಭರವಸೆ ನೀಡಿದರು. ಕುಂಜಿಲ ಪಯ್‌ನರಿ ಕಕ್ಕಬೆ ಸಂಪರ್ಕ ರಸ್ತೆಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ ಶಾಸಕರು, ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಭಾಗದ ಜನರಿಗೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಜಿಲ ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಶೌಕತ್ ಅಲಿ ಮಕ್ಕಿ ವಹಿಸಿದ್ದರು. ವೈ.ಕೆ. ಹಂಝ ಪ್ರಾಸ್ತಾವಿಕ ಭಾಷಣ ಮಾಡಿದರು. ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಎ.ಎ. ಮುಹಮ್ಮದ್ ಹಾಜಿ ಸ್ವಾಗತಿಸಿದರು. ಕುಂಜಿಲ ಪಯ್‌ನರಿ ಜಮಾಅತ್ ಖತೀಬ ಉಸ್ತಾದ್ ನಿಝಾರ್ ಅಹ್ಸನಿ ಕಕ್ಕಿಡಿಪುರಂ ಪ್ರಾರ್ಥನೆ ನಿರ್ವಹಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಬಾಚಮಂಡ ರಾಜ ಪೂವಣ್ಣ, ಕಕ್ಕಬೆ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಕಕ್ಕಬೆ - ಕುಂಜಿಲ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯಿತಿ ಸದಸ್ಯರಾದ ಬಶೀರ್ ಪೂಯಕ್ಕರೆ, ರಝು ಕುಂಡAಡ, ಹರಿ ಮರಂದೋಡ, ಕುಡಿಯರ ಮುತ್ತಪ್ಪ, ಮುಸ್ತಫಾ ಬಾರಿಕೆ, ಮೂಸ ಪತ್ತಂಗೋಡ್, ಉಸ್ಮಾನ್ ವಯಕೋಲ್, ಕಾರಂಗೋಡ್ ಹಾರಿಸ್, ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‌ನ ಆಡಳಿತ ಮಂಡಳಿ ಸಲಹಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮತ್ತು ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.