ಮುಳ್ಳೂರು, ನ. ೭: ವಿದ್ಯಾರ್ಥಿ ಗಳಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಅಧ್ಯಕ್ಷ ಕೆ. ಗೋಕುಲ್ ಅಭಿಪ್ರಾಯಪಟ್ಟರು.
ಸಮೀಪದ ಗೌಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ಕಂದಾಯ, ಶಿಕ್ಷಣ, ಮಕ್ಕಳ ಕಲ್ಯಾಣ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಕಾನೂನು ಅರಿವು ಹಾಗೂ ಜಾಗೃತಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಾನೂನು ವ್ಯವಸ್ಥೆಯ ಬಗ್ಗೆ ಅರಿವು ಹೊಂದಿರ ಬೇಕು. ಇದರಿಂದ ಭ್ರಷ್ಟಾಚಾರದಂತಹ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ ಎಂದರು.
ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್. ವಿಠಲ್ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಶಿಕ್ಷಣಕ್ಕೆ ಭ್ರಷ್ಟಾಚಾರವನ್ನು ಹೋಗಲಾಡಿಸುವ ಶಕ್ತಿ ಇದೆ ಎಂದರು.
ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್. ನರಗುಂದ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾವಂತರಾಗಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶನಿವಾರಸಂತೆ ಉಪ ತಹಶೀಲ್ದಾರ್ ನಾಗರಾಜು, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ನವೀನ್, ಪಿಡಿಓ ಲಿಖಿತ, ಶಾಲಾ ಮುಖ್ಯ ಶಿಕ್ಷಕ ಜಾಧವ್, ಶಿಕ್ಷಕರಾದ ಪೂವಯ್ಯ, ಪ್ರವೀಣ್ ಮುಂತಾದವರು ಹಾಜರಿದ್ದರು.