ಐಗೂರು, ನ. ೭: ಜನರ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವ ಕಿರಗಂದೂರು ಸೇತುವೆ ಕಾಯಕಲ್ಪಕ್ಕೆ ಕಾಯುತ್ತಿದ್ದು, ತೀರಾ ಹದಗೆಟ್ಟ ಸ್ಥಿತಿಯಲ್ಲಿರುವ ಮಾರ್ಗದಲ್ಲಿ ಸಂಚರಿಸುವುದು ದುಸ್ತರವಾಗಿದೆ. ಕಾಮಗಾರಿ ವಿಳಂಬದಿAದ ಮತ್ತಷ್ಟು ಸಮಸ್ಯೆಯಾಗಿದ್ದು, ನೂತನ ಸೇತುವೆಯನ್ನು ತ್ವರಿತವಾಗಿ ನಿರ್ಮಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

ಐಗೂರು ಮತ್ತು ಕಿರಗಂದೂರು ಪಂಚಾಯಿತಿ ವ್ಯಾಪ್ತಿಯ ಗಡಿಭಾಗದಲ್ಲಿರುವ ಡಿಬಿಡಿ, ಬಾಗಲಖಂಡಿ ಮತ್ತು ದುದ್ದುಗಲ್ಲು ಮಾರ್ಗವಾಗಿ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆಯು ಹಾಳಾಗಿದ್ದು, ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ. ಸೇತುವೆಯ ಎರಡು ಭಾಗದಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಅವಘಡ ಸಂಭವಿಸುವ ಸಾಧ್ಯತೆಗಳಿವೆ.

ಸೇತುವೆಗೆ ಅಳವಡಿಸಿದ್ದ ಸಿಮೆಂಟ್ ಪೈಪ್‌ಗಳು ಹೊರಕ್ಕೆ ಬಂದಿದ್ದು, ಎರಡು ಕಡೆ ಕಾಡು ಬೆಳೆದು ಸೇತುವೆ ಇಲ್ಲದಂತೆ ಗೋಚರವಾಗುತ್ತಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಸೇತುವೆ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಹಂತದಲ್ಲಿದೆ ಎಂದು ಜನರು ಆರೋಪಿಸಿದ್ದಾರೆ. ೨೦೧೮ ರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸೇತುವೆಯ ಪಕ್ಕದಲ್ಲಿನ ಮನೆಗಳು ಜಲಾವೃತವಾಗಿದ್ದವು. ಈ ಭಾಗದಲ್ಲಿ ೪೦ ಕುಟುಂಬಗಳು ವಾಸಿಸುತ್ತಿವೆ. ವಿದ್ಯಾರ್ಥಿಗಳು, ಡಿಬಿಡಿ ತೋಟದ ಕಾರ್ಮಿಕರಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದಾಗಿದ್ದು, ಸ್ಮಶಾನ ದಾರಿಗೆ ಈ ಸೇತುವೆಯೇ ಸಂಪರ್ಕವಾಗಿದೆ. ಈ ಭಾಗದ ಜನರು ಹಲವು ಬಾರಿ ಇಲಾಖಾಧಿಕಾರಿಗಳಿಗೆ ಈ ಬಗ್ಗೆ ಗಮನ ಸೆಳೆದರೂ ಯಾವುದೇ ಸ್ಪಂದನ ದೊರೆತಿಲ್ಲ. ಸಾರ್ವಜನಿಕರ ಒತ್ತಡದಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ ಅನುದಾನ ಬಿಡುಗಡೆಯಾಗಿದ್ದು, ಸಂಬAಧಿಸಿದ ಅಭಿಯಂತರರು ಸ್ಥಳ ಪರಿಶೀಲನೆ ಮಾಡಿ ಗುತ್ತಿಗೆದಾರರ ಮೂಲಕ ಎರಡು ಲೋಡು ಎಂ ಸ್ಯಾಂಡ್ ಮತ್ತು ಜಲ್ಲಿಯನ್ನು ತಂದು ಹಾಕಲಾಗಿದೆ. ಆದರೆ, ಕೆಲಸ ಆರಂಭಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ತಂದು ಹಾಕಿರುವ ಜಲ್ಲಿ ಮತ್ತು ಎಂ ಸ್ಯಾಂಡ್ ಕಾಡು ಬೆಳೆದು ಮುಚ್ಚಿಹೋಗಿದೆ. ಶೀಘ್ರ ಕಾಮಗಾರಿ ಆರಂಭಿಸಿ ಜನರ ಸಮಸ್ಯೆ ಬಗೆಹರಿಸುವಂತೆ ಕಿರುಗಂದೂರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಣೇಶ್, ಈ ಭಾಗದ ನಿವಾಸಿಗಳಾದ ಆನಂದ, ಬಸವರಾಜು, ಮುರುಗ, ದಿನೇಶ್ ಶೆಟ್ಟಿ, ಸುಬ್ರಮಣಿ ಮತ್ತು ಸುನಂದರಾಮಕೃಷ್ಣ ಒತ್ತಾಯಿಸಿದ್ದಾರೆ.

- ಎಂ.ಎ. ಸುಕುಮಾರ