ಮಡಿಕೇರಿ, ನ. ೭: ಮೂರ್ನಾಡು ಸರಕಾರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಅರಮನೆಪಾಲೆ ಸಮಾಜದ ಮಹಾಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಚೆನಿಯ ನಾಪೋಕ್ಲು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಪಿ.ಕೆ. ಬೆಳ್ಯಪ್ಪ ಚೇಲಾವರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಯೋಧ ಶಿವಪ್ಪ, ಕಂಡಿಮಕ್ಕಿ ಸುಭಾಷ್ ಬಾಳುಗೋಡು, ನಿವೃತ್ತ ವಾರ್ತಾ ಇಲಾಖೆ ನೌಕರ ಗಣೇಶ್ ಕುಂಜಿಲ, ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸಿ.ಇ.ಓ. ಉಮಾವತಿ, ಅರಮನೆ ಪಾಲೆ ಸಮಾಜದ ಕಾರ್ಯದರ್ಶಿ ದೇವಯ್ಯ ಹಾಕತ್ತೂರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜನಾಂಗ ಭಾಂದವರ ಬಹುದಿನಗಳ ಬೇಡಿಕೆಯಾದ ಕೊಡವ ಸಂಸ್ಕೃತಿಯಲ್ಲಿ ಪ್ರತ್ಯೇಕ ಭಾಷೆಯ ಅಸ್ತಿತ್ವದಲ್ಲಿ ಕೊಡಗಿನಲ್ಲಿ ಮಾತ್ರ ವಾಸಿಸುವ ಜನಾಂಗಕ್ಕೆ ಪ್ರತ್ಯೇಕವಾಗಿ ಅರಮನೆಪಾಲೆ ಎಂದು ಮಾನ್ಯತೆ ದೊರಕಿಸಲು ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಜನಾಂಗ ಬುಡಕಟ್ಟು ಸಂಸ್ಕೃತಿಯಲ್ಲಿ ಬದುಕುತಿದ್ದು ಅಸ್ತಿತ್ವದ ಭೀತಿ ಎದುರಿಸುತ್ತಿದ್ದು ಸರಕಾರದ ಸವಲತ್ತುಗಳು ಜನಾಂಗಕ್ಕೆ ತಲುಪದಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ವರ್ಷ, ನಿತ್ಯ ಪ್ರಾರ್ಥಿಸಿದರು. ರಾಧ ಹಾಲೇರಿ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ದೇವಯ್ಯ ಹಾಕತ್ತೂರು ವಾಚಿಸಿದರು. ಸುಶೀಲಾ ಪೇರೂರು ವಂದಿಸಿದರು.