ಸಿದ್ದಾಪುರ, ನ. ೭: ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯಕ್ಕೆ ಅಟ್ಟಿದರು.
ವೀರಾಜಪೇಟೆ ಹಾಗೂ ತಿತಿಮತಿ ಅರಣ್ಯ ವ್ಯಾಪ್ತಿಗೆ ಒಳಪಡುವ ಕಳತ್ಮಾಡು, ಕೈಕೇರಿ, ನಲ್ವತೋಕ್ಲು, ಹೊಸೂರು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದAದು ಕಾಫಿ ತೋಟದೊಳಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರು. ಆದರೆ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಾ ಕಾಫಿ ತೋಟದ ಒಳಗಿನಿಂದ ಬರಲು ಹಿಂದೇಟು ಹಾಕಿದವು. ಕಾರ್ಯಾ ಚರಣೆಯ ಸಂದರ್ಭದಲ್ಲಿ ಮೂರು ಮರಿಯಾನೆಗಳು ಸೇರಿದಂತೆ ೧೦ಕ್ಕೂ ಅಧಿಕ ಕಾಡಾನೆಗಳು ಕಂಡು ಬಂದವು ಎಂದು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ತಿಳಿಸಿದರು.
(ಮೊದಲ ಪುಟದಿಂದ) ಕಾರ್ಯಾಚರಣೆಯ ಸಂದರ್ಭ ಕಾಡಾನೆಗಳ ಹಿಂಡಿನಲ್ಲಿದ್ದ ಬೃಹತ್ ಗಾತ್ರದ ಸಲಗವೊಂದು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಲು ಮುಂದಾಗಿ ಕಾಫಿ ತೋಟದಿಂದ ಹೊರಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿತು ಎಂದು ಸಿಬ್ಬಂದಿ ತಿಳಿಸಿದರು.
ಕಾರ್ಯಾಚರಣೆ ತಂಡ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಎರಡು ಬಾರಿ ರಸ್ತೆ ದಾಟಿಸಲು ಯತ್ನಿಸಿದರೂ ಕೂಡ ಕಾಡಾನೆಗಳು ಹಿಂತಿರುಗಿ ತೋಟದತ್ತ ನುಗ್ಗಲು ಪ್ರಯತ್ನಿಸಿದವು. ಆದರೂ ಛಲಬಿಡದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚೆನ್ನಂಗಿ ಭಾಗದಲ್ಲಿರುವ ಅರಣ್ಯಕ್ಕೆ ಅಟ್ಟಿದರು. ಆದರೆ ಗುಂಪಿನಲ್ಲಿ ಇದ್ದ ಕೆಲವು ಕಾಡಾನೆಗಳು ಬೇರ್ಪಟ್ಟು ಕಾಫಿ ತೋಟದೊಳಗೆ ಉಳಿದುಕೊಂಡಿವೆ. ವೀರಾಜಪೇಟೆ ಹಾಗೂ ತಿತಿಮತಿ ವಲಯದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಇದೀಗ ಕೆಲವು ಭಾಗದಲ್ಲಿ ಕಾಫಿ ಹಣ್ಣಿನ ಕೊಯ್ಲು ಪ್ರಾರಂಭವಾಗಿದೆ. ವನ್ಯಪ್ರಾಣಿಗಳ ಹಾವಳಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರದAದು ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಎ.ಸಿ.ಎಫ್ ನೆಹರು ಹಾಗೂ ತಿತಿಮತಿ ಎ.ಸಿ.ಎಫ್. ಗೋಪಾಲ್ ನೇತೃತ್ವದಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ದಿವಾಕರ್, ಉಪವಲಯ ಅರಣ್ಯಾಧಿಕಾರಿಗಳಾದ ಸಂಜೀತ್ ಸೋಮಯ್ಯ, ಶ್ರೀಶೈಲಾ, ಅರಣ್ಯ ಸಿಬ್ಬಂದಿಗಳು ಆರ್.ಆರ್.ಟಿ. ಸಿಬ್ಬಂದಿಗಳು ಸೇರಿದಂತೆ ೩೦ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ವಾಸು ಎ.ಎನ್.