ಮಡಿಕೇರಿ, ನ. ೭ : ಪೌರ ಕಾರ್ಮಿಕರಿಗೆ ನಿವೇಶನ, ವಸತಿ ಸೇರಿದಂತೆ ಸರ್ಕಾರದಿಂದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ತಿಳಿಸಿದ್ದಾರೆ.
ಮಡಿಕೇರಿ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ‘ಪೌರ ಕಾರ್ಮಿಕರ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪೌರ ಕಾರ್ಮಿಕರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ಕರ್ತವ್ಯ ಸಂದರ್ಭದಲ್ಲಿ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಪೌರಕಾರ್ಮಿಕರು ರಜೆ ಕೇಳಿದ್ದಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದರ ಜೊತೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಡಾ. ಮಂಥÀರ್ ಗೌಡ ಹೇಳಿದರು. ನಗರಸಭೆಯಲ್ಲಿ ಓಬಳಿಯಂತಹ ಪೌರಕಾರ್ಮಿಕರು ನಾಲ್ಕು ದಶಕಗಳ ಕಾಲ ದುಡಿದಿದ್ದಾರೆ. ಅವರ ಆರೋಗ್ಯಕ್ಕೆ ಅಗತ್ಯ ನೆರವು ನೀಡಬೇಕು ಎಂದ ಶಾಸಕರು, ಓಬಳಿ ಅವರಿಗೆ ವೈಯಕ್ತಿಕವಾಗಿ ೧೦ ಸಾವಿರ ರೂ.ವನ್ನು ಇದೇ ಸಂದರ್ಭದಲ್ಲಿ ನೀಡಿದರು. ಜೊತೆಗೆ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಶಾಸಕರು ವಸ್ತç ವಿತರಿಸಿದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ಗೌರವಿಸಬೇಕು ಎಂದರು.
ಪೌರಕಾರ್ಮಿಕರಿಗೆ ಸರ್ಕಾರ ದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಕೆಲಸ ಆಗಬೇಕಿದೆ. ಎಲ್ಲಾ ಪೌರಕಾರ್ಮಿಕರಿಗೂ ವಸತಿ ಸೌಲಭ್ಯ
(ಮೊದಲ ಪುಟದಿಂದ) ಕಲ್ಪಿಸುವುದು ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ನಿವೇಶನ ಒದಗಿಸುವಂತಾಗಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ನಗರ, ಪಟ್ಟಣಗಳು ಸ್ವಚ್ಛವಾಗಿರಲು ಪೌರಕಾರ್ಮಿಕರ ಕರ್ತವ್ಯ ನಿಷ್ಠೆ ಹೆಚ್ಚಿನದ್ದಾಗಿದೆ.
ದಸರಾ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಪೌರಕಾರ್ಮಿಕರು ನಿರ್ವಹಿಸಿದ್ದಾರೆ. ಮುಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಗೌರವಿಸು ವಂತಾಗಬೇಕು ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಪೌರಕಾರ್ಮಿಕರು ಪ್ರತಿನಿತ್ಯ ಬೆಳಗ್ಗಿನ ಜಾವ ಕರ್ತವ್ಯ ನಿರ್ವಹಿಸುವುದು ಶ್ಲಾಘನೀಯ ಎಂದು ಹೇಳಿದರು.
ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ಪೌರ ಕಾರ್ಮಿಕರಿಗೆ ಶೀಘ್ರ ವಸತಿ ಸೌಲಭ್ಯ ಕಲ್ಪಿಸಬೇಕು. ಪೌರಕಾರ್ಮಿಕರ ಜೀವನ ಮಟ್ಟ ಸುಧಾರಿಸಬೇಕು ಎಂದರು.
ಪೌರಾಯುಕ್ತ ವಿಜಯ ಮಾತನಾಡಿ, ಮಡಿಕೇರಿ ನಗರಸಭೆ ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ ಪಾತ್ರ ಹೆಚ್ಚಿನದ್ದಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಒಂದು ಕೋಟಿ ರೂ. ತೆರಿಗೆ ಸಂಗ್ರಹವಾಗಿರುವುದು ವಿಶೇಷವಾಗಿದೆ. ಪೌರಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯವನ್ನು ಮರೆಯಬಾರದು ಎಂದು ಪೌರಾಯುಕ್ತ ಕಿವಿಮಾತು ಹೇಳಿದರು.
ಖಾಯಂ ಪೌರಕಾರ್ಮಿಕರಿಗೆ ತಲಾ ೭ ಸಾವಿರ ವಿಶೇಷ ಭತ್ಯೆ ಚೆಕ್ ವಿತರಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಯಿತು. ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಸದಸ್ಯರಾದ ಮಹೇಶ್ ಜೈನಿ ಮಾತನಾಡಿದರು. ಶಾಸಕ ಡಾ. ಮಂಥರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ನಗರಸಭೆ ಸದಸ್ಯರಾದ ಉಮೇಶ್ ಸುಬ್ರಮಣಿ, ಚಿತ್ರಾವತಿ, ಕಲಾವತಿ, ಉಷಾ, ಶ್ವೇತಾ, ಸಬಿತಾ, ಅರುಣ್ ಶೆಟ್ಟಿ, ಶಾರದ, ಚಂದ್ರಶೇಖರ್, ಪೌರ ಸೇವಾ ನೌಕರರ ಜಿಲ್ಲಾಧ್ಯಕ ಪಿ.ಕೆ.ಸತೀಶ್, ತಾಲೂಕು ಅಧ್ಯಕ್ಷ ಎಸ್.ಕೆ.ಸತ್ಯನಾರಾಯಣ, ಇತರರು ಇದ್ದರು.
ಪರಿಸರ ಇಂಜಿನಿಯರ್ ಸೌಮ್ಯ ನಿರೂಪಿಸಿದರು. ಸಹಾಯಕ ಇಂಜಿನಿಯರ್ ಹೇಮಂತ್ ಕುಮಾರ್ ಸ್ವಾಗತಿಸಿದರು. ನಗರಸಭೆ ಕಂದಾಯ ಅಧಿಕಾರಿ ತಾಹೀರ್ ವಂದಿಸಿದರು.