ಮಡಿಕೇರಿ, ನ. ೬: ರಾಜ್ಯದ ಬೇರೆ ಜಿಲ್ಲೆಗಳಲ್ಲಿರುವಂತೆ ಕೊಡಗಿನಲ್ಲಿಯೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಮತ್ತೆ ಜಿಲ್ಲಾಡಳಿತ ಜಾರಿಗೆ ತರಬೇಕೆಂದು ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಮನವಿ ಮಾಡಿದರು.

ಸಮರ್ಥ ಕನ್ನಡಿಗರು ಸಂಸ್ಥೆಯಿAದ ನಗರದ ಓಂಕಾರ ಸದನದಲ್ಲಿ ಆಯೋಜಿತ ಕನ್ನಡ ಹಬ್ಬ ದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ನವಂಬರ್‌ನಲ್ಲಿ ಆಯಾ ಜಿಲ್ಲಾಡಳಿತ ಅಂಥ ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಾ ಬರುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ರಾಜ್ಯೋತ್ಸವ ಸಂದರ್ಭ ಇಂಥ ಸನ್ಮಾನ, ಗೌರವಾರ್ಪಣೆ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸಿ ಸಾಧಕರನ್ನು ಗೌರವಿಸಿ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕೆಂದು ಕೋರಿದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕನ್ನಡ ಭಾಷಾ ಸಾಹಿತ್ಯ ಸಂರಕ್ಷಣೆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಗ್ರಂಥಾಲಯಗಳನ್ನು ಮತ್ತಷ್ಟು ಓದುಗ ಸ್ನೇಹಿಯಾಗಿಸಬೇಕು. ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಓದಿನ ಮಹತ್ವ ತಿಳಿಸುವಂತ ಕೆಲಸವಾಗಬೇಕು. ಕೊಡಗಿನಲ್ಲಿ ಗ್ರಾ.ಪಂ. ಗಳಲ್ಲಿರುವ ಡಿಜಿಟಲ್ ಲೈಬ್ರರಿಗಳಲ್ಲಿರುವ ಸಹಸ್ರಾರು ಸಾಹಿತ್ಯ ಬರಹಗಳು ಓದುಗರ ಗಮನಕ್ಕೆ ಬರುವಂಥ ಪ್ರಚಾರ ಕೈಗೊಳ್ಳಬೇಕಾಗಿದೆ ಎಂದರು. ಸಮರ್ಥ ಕನ್ನಡಿಗರು ಸಂಸ್ಥೆಯನ್ನು ಕೊಡಗು ಜಿಲ್ಲೆಯಲ್ಲಿ ೭ ವರ್ಷಗಳಿಂದ ಸರ್ಕಾರದ ಅನುದಾನವಿಲ್ಲದೇ ಮಹಿಳೆಯರೇ ನಿರ್ವಹಿಸುತ್ತಾ ಬರುವ ಮೂಲಕ ತಾವು ಸಮರ್ಥ ಕನ್ನಡತಿಯರು ಎಂದು ನಿರೂಪಿಸಿದ್ದಾರೆ ಎಂದೂ ಅನಿಲ್ ಹರ್ಷ ವ್ಯಕ್ತಪಡಿಸಿದರು. ಮಡಿಕೇರಿ ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ನಡೆಯುವ ಕನ್ನಡ ಪರ ಕಾರ್ಯಕ್ರಮಗಳಿಗೆ ಅನುದಾನ ನೀಡುವ ಮೂಲಕ ನಗರಸಭೆ ಕೂಡ ಕನ್ನಡಕ್ಕೆ ಸಂಬAಧಿಸಿದ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕೆಂದು ಅನಿಲ್ ಸಲಹೆ ನೀಡಿದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಧಾನ ಸಂಚಾಲಕ ಆನಂದ ದಗ್ಗನಹಳ್ಳಿ ಮಾತನಾಡಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆ ೭ ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಸಮಾಜಸೇವೆಯ ಮೂಲಕ ಜನಪರ ಚಟುವಟಿಕೆ ಹಮ್ಮಿಕೊಂಡು ಬಂದಿದೆ. ಕೊಡಗಿನಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆ ಅತ್ಯಂತ ಸಕ್ರಿಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಯುವ ದಂತ ವೈದ್ಯೆ ಡಾ. ಅನುಶ್ರೀ ಅನಂತಶಯನ ಮಾತನಾಡಿ, ಸಮರ್ಥ ಕನ್ನಡಿಗರು ಸಂಸ್ಥೆಯು ಹಲವಾರು ಕಾರ್ಯಕ್ರಮಗಳ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪಣ ತೊಟ್ಟಿರುವುದು ಶ್ಲಾಘನೀಯ ಎಂದರು. ಸಮಾಜ ಸೇವಕಿ ಕಲ್ಲುಮಾಡಂಡ ಶಶಿ ಮೊಣ್ಣಪ್ಪ, ಸಮರ್ಥ ಕನ್ನಡಿಗರು ಸಂಸ್ಥೆಯ ಕೆ.ಆರ್. ನಗರ ತಾಲೂಕು ಘಟಕದ ಸಂಚಾಲಕ ಹೇಮಂತ್, ಕಲ್ಲಹಳ್ಳಿ ವೇದಿಕೆಯಲ್ಲಿದ್ದರು. ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಸಂಚಾಲಕಿ ಕೆ.ಜಯಲಕ್ಷಿö್ಮ ಸ್ವಾಗತಿಸಿದ ಕಾರ್ಯಕ್ರಮವನ್ನು ಪ್ರತಿಮಾ ಹರೀಶ್ ರೈ ನಿರೂಪಿಸಿ ಅರ್ಪಿತಾ ಸಂದೀಪ್ ಪ್ರಾರ್ಥಿಸಿದರು.

ಕವಿತೆ ಓದು - ಕವಿಗೋಷ್ಠಿ

ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಕವಿತೆ ಓದು - ಕವಿಗೋಷ್ಠಿಯಲ್ಲಿ ಆನಂದ್ ದೆಗ್ಗನಹಳ್ಳಿ, ಗಿರೀಶ್ ಕಿಗ್ಗಾಲು, ರಜಿತಾ ಕಾರ್ಯಪ್ಪ, ಸುನೀತಾ ಕುಶಾಲನಗರ, ಹೇಮಂತ್ ಕಲ್ಲಹಳ್ಳಿ, ಕೃಪಾ ದೇವರಾಜ್, ಹೇಮಂತ್ ಪಾರೇರ, ರಂಜಿತ್ ಕವಲಪಾರ, ಡಾ.ಸತೀಶ್ ಎಸ್.ವಿ. ಕವನ ವಾಚಿಸಿದರು. ಶ್ರೀರಕ್ಷಾ ಪ್ರಭಾಕರ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಅಬ್ದುಲ್ ಕೌಸರ್ ನಿರೂಪಿಸಿದರು.