ಮಡಿಕೇರಿ, ನ. ೬: ವ್ಯವಸ್ಥಿತವಾಗಿ ದಸರಾ ಆಚರಣೆಗೆ ಪ್ರಾಧಿಕಾರದ ಅವಶ್ಯಕತೆ ಇದ್ದು, ಬಜೆಟ್ನಲ್ಲಿ ಇದಕ್ಕಾಗಿ ಸರಕಾರ ಹಣ ಮೀಸಲಿಡಬೇಕೆಂದು ದಸರಾದಲ್ಲಿ ಕಾರ್ಯನಿರ್ವಹಿಸಿದ್ದ ಪ್ರಮುಖರು ಅಭಿಮತ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್, ಮಡಿಕೇರಿ ದಸರಾ ಇತ್ತೀಚಿನ ವರ್ಷಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಆಚರಣೆಗಳು ಕ್ರಮಬದ್ಧವಾಗಿ ಮಾಡದೆ ಮರೆಯುತ್ತಿದ್ದೇವೆ. ಸಾಂಕ್ರಮಿಕ ರೋಗ ಹರಡಿದ ಕಾಲದಲ್ಲಿ ರಾಜರು ಕರಗೋತ್ಸವ ಮೂಲಕ ಮಡಿಕೇರಿ ದಸರಾಕ್ಕೆ ಮುನ್ನುಡಿ ಇಟ್ಟರು. ಆಚರಣೆಯ ಮೂಲವನ್ನು ಯಾರೂ ಮರೆಯಬಾರದು ಎಂದರು.
ಈ ಬಾರಿ ದಸರಾ ಹಿಂದೆAದಿಗಿAತಲೂ ಅದ್ದೂರಿಯಾಗಿ ನಡೆದಿದೆ. ಜಿಲ್ಲೆಯ ಶಾಸಕರು ಅಗತ್ಯ ಸಹಕಾರ ನೀಡಿ ಸರಕಾರದಿಂದ ಪೂರಕ ಅನುದಾನ ಒದಗಿಸಿದ್ದಾರೆ. ಆದರೆ, ದಶಮಂಟಪ ಶೋಭಾಯಾತ್ರೆ ಸಮರ್ಪಕ ಪ್ರದರ್ಶನ ನೀಡದಿರುವುದು ಬೇಸರದ ಸಂಗತಿ. ಲಕ್ಷಾಂತರ ರೂಪಾಯಿ ವ್ಯಯಿಸಿ ಮಂಟಪ ನಿರ್ಮಿಸಲಾಗುತ್ತದೆ. ಆದರೆ, ಸೀಮಿತ ಜಾಗದಲ್ಲಿ ನಿಲ್ಲಿಸಿ ಜನರಿಗೆ ಪ್ರದರ್ಶನ ನೀಡುತ್ತಿಲ್ಲ. ಮಂಟಪಗಳು ಎಲ್ಲೂ ನಿಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಸೂರ್ಯೋದಯಕ್ಕೂ ಮುನ್ನ ಬನ್ನಿ ಕಡಿಯುವ ಜಾಗದ ತನಕ ಬಂದು ಕೈಜೋಡಿಸಬೇಕು ಎಂದು ತಿಳಿಸಿದರು.
ಮಡಿಕೇರಿ ದಸರಾ ಸಮಿತಿ ಮಾಜಿ ಅಧ್ಯಕ್ಷ ಎಂ.ಪಿ. ಕೃಷ್ಣರಾಜು ಮಾತನಾಡಿ, ಆಚರಣೆ ಕ್ರಮಬದ್ಧತೆ ಕಳೆದುಕೊಂಡಿದೆ. ಸಂಭ್ರಮದೊAದಿಗೆ ಸಾಂಪ್ರದಾಯಿಕ ಆಚರಣೆ ಮರೆಯಬಾರದು. ನಡೆದುಕೊಂಡು ಬಂದ ರೀತಿ-ನೀತಿಗಳನ್ನು ಮುಂದುವರೆಸಿಕೊAಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಗೋಷ್ಠಿಯಲ್ಲಿ ದಸರಾ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್, ಚೌಡೇಶ್ವರಿ ದೇವಾಲಯ ಸಮಿತಿ ಪ್ರಮುಖ ದೇವರಮನೆ ಮೋಹನ್, ದಂಡಿನ ಮಾರಿಯಮ್ಮ ದೇವಾಲಯ ಮಾಜಿ ಅಧ್ಯಕ್ಷ ಬಾಬು ನಾಯ್ಡು, ದೇಚೂರು ರಾಮಮಂದಿರ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಎನ್.ಸಿ. ಸುನಿಲ್ ಹಾಜರಿದ್ದರು.