ಕಣಿವೆ, ನ. ೧: ಕಾಡುಗಿಡ ಸಸ್ಯಗಳಿಂದ ಆವೃತವಾದ ಮಕ್ಕಳ ಆಟಿಕೆಗಳು....
ಬೇಲಿಯುದ್ದಕ್ಕೂ ಬೆಳೆದು ನಿಂತ ಗಿಡ ಬಳ್ಳಿಗಳು.... ಕಿತ್ತು ನಿಂತು ಕಾಡಾನೆಗಳ ದಾಳಿಗೆ ತುತ್ತಾದಂತಿರುವ ಆಸನಗಳು....
ಅಲಂಕಾರಕ ಹೂ - ಗಿಡಗಳ ಜಾಗದಲ್ಲಿ ಬೆಳೆದು ನಿಂತಿರುವ ಕಾಡು ಬಳ್ಳಿಗಳು.... ಕಾಡು ಗಿಡಗಳ ಮಧ್ಯೆ ಬಂಧಿಯಾಗಿರುವ ವಾಕಿಂಗ್ ಪಾಥ್.... ಇದು ಕೊಡಗಿನ ಪ್ರಸಿದ್ಧ ಪ್ರವಾಸಿ ಸ್ಥಳ ಹಾರಂಗಿ ಜಲಾಶಯದ ಮುಂಬದಿಯಲ್ಲಿ ಪ್ರಸಕ್ತ ಕಾಣುತ್ತಿರುವ ವಾಸ್ತವ.
ನೀರಾವರಿ ನಿಗಮದ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಳೆದ ಹತ್ತು ವರ್ಷಗಳ ಹಿಂದೆ ರೂ ೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಆಕರ್ಷಕ ಹಾರಂಗಿ ಉದ್ಯಾನ ಇಂದು ಸಂಪೂರ್ಣ ಕಾಡುಪಾಲಾದಂತಿದೆ.
ದೂರದ ಸ್ಥಳಗಳಿಂದ ಕೊಡಗಿನ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಧಾವಿಸುವ ಪ್ರವಾಸಿಗರು ಹಾರಂಗಿ ಜಲಾಶಯಕ್ಕೆ ಬಂದು ಅಲ್ಲಿನ ಪ್ರವೇಶ ದ್ವಾರದಲ್ಲಿ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಉದ್ಯಾನದ ಪರಿಕಲ್ಪನೆ ಮಾಯವಾಗಿದ್ದು, ಅರಣ್ಯ ಇಲಾಖೆಯವರು ಜಲಾಶಯದ ಮುಂಬದಿ ಬೆಳೆಸಿರುವ ಕಾಡು ಗಿಡಗಳಿಗೇಕೆ ಬೇಲಿ ಹಾಕಿದ್ದಾರೆ ಎಂಬAತೆ ಭಾಸವಾಗುವುದರಲ್ಲಿ ಅಚ್ಚರಿಯಿಲ್ಲ.
ಹಿಂದಿನ ಶಾಸಕ ಅಪ್ಪಚ್ಚು ರಂಜನ್ ಅವರ ಆಸಕ್ತಿಯ ಫಲದಿಂದ ಬಸವರಾಜ ಬೊಮ್ಮಾಯಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯ ಸರ್ಕಾರದಿಂದ ರೂ. ೫ ಕೋಟಿ ಅನುದಾನ ತಂದು ಜಲಾಶಯದ ಮುಂಬದಿಯ ಸುಮಾರು ೫೦ ಎಕರೆಗೂ ಹೆಚ್ಚಿನ ವಿಶಾಲ ವ್ಯಾಪ್ತಿಯಲ್ಲಿ ಸುಂದರ ಉದ್ಯಾನವನವನ್ನು ನಿರ್ಮಿಸಲಾಗಿತ್ತು.
ಉದ್ಯಾನವನವನ್ನು ನಿರ್ವಹಿಸಲು ನಿತ್ಯವೂ ಒಂದಷ್ಟು ದಿನಗೂಲಿ ಕಾರ್ಮಿಕರು ಸಾಕಿತ್ತು. ಸರ್ಕಾರದ ಅನುದಾನದ ಕೊರತೆಯ ನೆಪವೊಡ್ಡಿರುವ ಅಧಿಕಾರಿಗಳು ಮತ್ತೆ ಹೊಸ ಉದ್ಯಾನ ನಿರ್ಮಿಸುವ ಆತುರಕ್ಕೆ ಜೋತು ಬಿದ್ದು ಈಗ ಇದ್ದಂತಹ ಉದ್ಯಾನವನ್ನು ಹಾಳುಗೆಡವಿದ್ದಾರೆ.
ಕೃಷ್ಣರಾಜಸಾಗರ ಜಲಾಶಯದ ಕಾರಂಜಿಯನ್ನು ಮೀರಿಸುವಂತಹ ಮಾದರಿಯಲ್ಲಿ ಆರಂಭದಲ್ಲಿ ಇದ್ದಂತಹ ಈ ಉದ್ಯಾನ ಇಂದು ಸರಿಪಡಿಸಲಾಗದಷ್ಟು ಅಧ್ವಾನಕ್ಕೊಳಗಾಗಿದೆ.
ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ನಿರಾಸೆಯಿಂದ ಮರಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹಾರಂಗಿಗೆ ಬರುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿ ಮಾಡುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯದ ಒಳನೋಟವನ್ನು ಕಣ್ತುಂಬಿಕೊಳ್ಳಲು ಅನುವು ಮಾಡುತ್ತಿಲ್ಲ. ಕೊನೆ ಪಕ್ಷ ಉದ್ಯಾನವನ್ನು ನೋಡಿಯಾದರೂ ಒಂದಿಷ್ಟು ಸಂತಸ ಪಟ್ಟು ಮರಳಬೇಕಿದ್ದ ಪ್ರವಾಸಿಗರು ಅಯ್ಯೋ ಇದೇನಿದು ಹಾರಂಗಿ ಅವ್ಯವಸ್ಥೆ ಎಂದುಕೊAಡು ಅಧಿಕಾರಿಗಳಿಗೆ ಹಾಗೂ ಇಲ್ಲಿನ ರಾಜಕಾರಣಿಗಳಿಗೆ ಒಂದಷ್ಟು ಹಿಡಿಶಾಪ ಹಾಕಿ ಮರಳುತ್ತಿದ್ದಾರೆ.
ಸುಂದರವಾಗಿದ್ದ ಉದ್ಯಾನದ ಅವಸಾನಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
-ವರದಿ : ಕೆ.ಎಸ್.ಮೂರ್ತಿ