ಪೊನ್ನಂಪೇಟೆ, ನ. ೧: ಪೊನ್ನಂಪೇಟೆ ತಾಲೂಕಿನ ಚೇನಿವಾಡ ಗ್ರಾಮದ ಮತ್ರಂಡ ಕುಶಾಲಪ್ಪ ಮತ್ತು ಮಂಡೆಚAಡ ದಿನೇಶ್ ಚಿಟ್ಟಿಯಪ್ಪ ಎಂಬವರ ಗದ್ದೆಗಳಿಗೆ ಕಾಡಾನೆಗಳು ದಾಳಿ ನಡೆಸಿ ಭತ್ತದ ಪೈರುಗಳನ್ನು ತುಳಿದು ನಾಶಗೊಳಿಸಿವೆ. ಆನೆಗಳ ಹಾವಳಿಗೆ ಇಬ್ಬರು ರೈತರ ಅರ್ಧ ಎಕರೆಗೂ ಹೆಚ್ಚು ಭತ್ತದ ಪೈರು ನೆಲಕಚ್ಚಿವೆ. ಈ ಬಾರಿ ಮಳೆಯ ಅಭಾವದ ನಡುವೆಯೂ ಕಷ್ಟಪಟ್ಟು ನಾಟಿ ಮಾಡಿದ್ದ ಪೈರುಗಳು ನಾಶವಾಗಿರುವುದು ರೈತರನ್ನು ಕಂಗೆಡಿಸಿದೆ. ಮತ್ರಂಡ ಸುಕು ಬೋಪಣ್ಣ ಎಂಬವರ ಕಾಫಿಗಿಡ ಹಾಗೂ ತೆಂಗಿನಗಿಡ ಆನೆ ತುಳಿತಕ್ಕೆ ನಾಶವಾಗಿವೆ. ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯ ವಲಯ ಆರ್.ಎಫ್.ಓ ಶಂಕರ್, ಡಿ.ವೈ.ಆರ್.ಎಫ್.ಓ. ದಿವಾಕರ್ ಮತ್ತು ಆರ್.ಆರ್.ಟಿ. ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಕಾಡನೆ ದಾಳಿಗೆ ಬೆಳೆನಾಶವಾಗಿರುವ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಆದಷ್ಟು ಬೇಗ ನಾಡಿಗೆ ಬಂದಿರುವ ಕಾಡಾನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.