ಚೆಯ್ಯಂಡಾಣೆ, ಅ. ೩೧: ಕಾರ್ಮಿಕ ಮಹಿಳೆಯೊಬ್ಬಳು ಕಾಫಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ನಡೆದಿದೆ.
ಕೊಳಕೇರಿ ಗ್ರಾಮದ ನಿವಾಸಿ ಕೇಟೋಳಿರ ಗಣಪತಿ ಎಂಬವರ ತೋಟದಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಭವಾನಿ (೩೨) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಚೋಮನೊಂದಿಗೆ ಗಣಪತಿ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಭವಾನಿ ಪತಿ, ಇಬ್ಬರು ಮಕ್ಕಳು ವಾಸಮಾಡುತ್ತಿದ್ದರು. ಮಂಗಳವಾರ ಮುಂಜಾನೆ ಲೈನ್ ಮನೆಯ ಪಕ್ಕದಲ್ಲಿರುವ ಕಾಫಿ ಗಿಡಕ್ಕೆ ಭವಾನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತೋಟದ ಮಾಲೀಕ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.