ಸೋಮವಾರಪೇಟೆ, ನ. ೧: ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಕಚೇರಿಯನ್ನು ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ ನೂತನವಾಗಿ ತೆರೆಯಲಾಗಿದ್ದು, ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು.

ನಂತರ ಮಾತನಾಡಿ, ರೈತ ಸಂಘವು ಕಳೆದ ಅನೇಕ ದಶಕಗಳಿಂದ ರೈತರು, ಸಾರ್ವಜನಿಕರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದ್ದರೂ, ಇನ್ನಷ್ಟು ಸಮಸ್ಯೆಗಳು ಬಾಕಿಯಿವೆ. ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಹೋರಾಟದ ಮೂಲಕ ನ್ಯಾಯ ಪಡೆಯಬೇಕು ಎಂದರು.

ತಾಲೂಕು ಕಚೇರಿ, ಸರ್ವೆ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಲಂಚದ ಬೇಡಿಕೆಯಿಂದಾಗಿ ರೈತರ ಕಡತಗಳು ಧೂಳು ಹಿಡಿಯುತ್ತಿವೆ. ಇವುಗಳ ಬಗ್ಗೆ ಸಂಘವು ನಿರ್ಣಾಯಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕರೆ ನೀಡಿದರು. ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಮುದ್ದಪ್ಪ, ಮಾಹಿತ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್, ರೈತ ಸಂಘದ ಲಿಂಗೇರಿ ರಾಜೇಶ್, ಗಣ ಗೂರು ಚಂದ್ರಶೇಖರ್, ಗರಗಂದೂರು ಲಕ್ಷö್ಮಣ್ ಅವರುಗಳು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ವಹಿಸಿದ್ದರು. ರೈತ ಸಂಘದ ರಾಜಪ್ಪ ಮಾಸ್ಟರ್, ಹೆಚ್.ಇ. ರಮೇಶ್, ಮಚ್ಚಂಡ ಅಶೋಕ್, ಕೊಡ್ಲಿಪೇಟೆ ಪ್ರಸನ್ನ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.