ಶನಿವಾರಸಂತೆ, ನ. ೧: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ “ಓದುವ ಬೆಳಕು’’ ಕಾರ್ಯಕ್ರಮದಡಿ “ವಾರ್ತಾ ಪತ್ರಿಕೆ ಓದುವ ಅಭಿಯಾನ’’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.

ಪಂಚಾಯಿತಿ ವ್ಯಾಪ್ತಿಯ ಶಾಲೆಗಳ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಅಕ್ಟೋಬರ್ ತಿಂಗಳಲ್ಲಿ ನಡೆದ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅ. ೩೧ ಮಂಗಳವಾರ ಕೊನೆಯ ಕಾರ್ಯಕ್ರಮವಾಗಿತ್ತು. ಹತ್ತತ್ತು ವಿದ್ಯಾರ್ಥಿಗಳು ಗುಂಪಿನಲ್ಲಿ ಕುಳಿತು ಗ್ರಂಥಾಲಯಕ್ಕೆ ಬರುವ ಜಿಲ್ಲೆ ಮತ್ತು ರಾಜ್ಯಮಟ್ಟದ ದಿನಪತ್ರಿಕೆಗಳನ್ನು ಓದಿದರು.

ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯಾ ಮಾತನಾಡಿ, ಮಕ್ಕಳಲ್ಲಿ ಓದುವ ಅಭಿರುಚಿ ಮತ್ತು ಹವ್ಯಾಸವನ್ನು ಉತ್ತೇಜಿಸುವುದೇ “ವಾರ್ತಾ ಪತ್ರಿಕೆ ಓದುವ ಅಭಿಯಾನ’’ದ ಉದ್ದೇಶವಾಗಿದೆ.ಪತ್ರಿಕೆ ಓದುವುದರಿಂದ ಮಕ್ಕಳು ದಿನನಿತ್ಯದ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಗ್ರಾಮ, ಜಿಲ್ಲೆ, ರಾಜ್ಯದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಸ್ಪರ್ಧಾತ್ಮಕ ವಿಷಯ, ಕ್ರೀಡಾ ಸುದ್ದಿ, ಪದಬಂಧ ಜೋಡಣೆ, ಮುಖ್ಯ ದಿನಗಳಲ್ಲಿ ನಡೆಯುವ ದಿನಗಳ ಮಹತ್ವ, ಇತ್ಯಾದಿಗಳನ್ನು ತಿಳಿದುಕೊಂಡು ಪ್ರಯೋಜನ ಹೊಂದುತ್ತಾರೆ ಎಂದರು.

ಅಭಿಯಾನದಲ್ಲಿ ಅಕ್ಷತಾ, ವೀಣಾ, ನಿಶಿತಾ, ಅಂಬಿಕಾ, ಅನನ್ಯಾ, ನಟರಾಜ್, ಪ್ರೀತಮ್, ಜಿತೇಶ್, ತುಳಸಿ, ಅಪೂರ್ವಾ ಇತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.