ಕಣಿವೆ, ನ. ೧: ಕಣ್ಣೆದುರೇ ಜಲ ವಿದ್ಯುತ್ ಉತ್ಪಾದನಾ ಘಟಕ ವಿದ್ದರೂ ಕೂಡ ವಿದ್ಯುತ್ ಬೆಳಕು ಕಾಣದೆ ಕತ್ತಲಲ್ಲೇ ದಿನಗಳೆಯುವ ಮಂದಿ. ಸರ್ಕಾರದ ಸೌಕರ್ಯ ಗಳು ಸರಿಯಾಗಿ ಸಿಗದ ಕಾರಣ ಇನ್ನೂ ಕೂಡ ಆದಿ ಮಾನವರಂತೆ ಬದುಕುತ್ತಿರುವ ಜೇನು ಕುರುಬ ನಿವಾಸಿಗಳು.

ಹಾರಂಗಿ ಜಲಾಶಯದ ಸೆರಗಿನಲ್ಲಿ, ಅತ್ತೂರು ಮೀಸಲು ಅರಣ್ಯದಂಚಿನಲ್ಲಿ ನೆಲೆ ಕಂಡಿರುವ ಜೇನು ಕುರುಬ ಕುಟುಂಬಗಳು ಆದಿ ಮಾನವರಂತೆ ಜೀವನ ಸವೆಸುತ್ತಿದ್ದರೂ ಕೂಡ ಜಿಲ್ಲಾಡಳಿತ ಇತ್ತ ಗಮನ ಕೊಡದಿರುವುದು ಮಾತ್ರ ವಿಷಾದಕರ ಸಂಗತಿಯಾಗಿದೆ. ಅಕ್ಷರ ವಂಚಿತ ನಿರಕ್ಷರ ಕುಕ್ಷಿಗಳೆಂಬ ಈ ಗಿರಿಜನ ಮಂದಿ ಸ್ವಾತಂತ್ರö್ಯ ಪೂರ್ವದಿಂದಲೂ ಇಲ್ಲಿ ವಾಸಿಸುತ್ತಿದ್ದಾರೆ.

ಆದರೆ ಇವರಿಗೆ ವಾಸಕ್ಕೆ ಯೋಗ್ಯವಾದ ಮನೆಗಳನ್ನು ಕಟ್ಟಿ ಕೊಡುವಲ್ಲಿ ಜಿಲ್ಲಾಡಳಿತ ಮುಂದಾಗಿಲ್ಲ.

ಇಲ್ಲಿನ ಅಮಾಯಕ ಮಂದಿ ಕಳೆದ ಹಲವು ವರ್ಷಗಳಿಂದಲೂ ಕತ್ತಲೆಯಲ್ಲೇ ದಿನಗಳೆಯುತ್ತಿದ್ದರೂ ಕೂಡ ಇವರಿಗೆ ಸೂಕ್ತ ಬೆಳಕಿನ ವ್ಯವಸ್ಥೆಯನ್ನೂ ಇದುವರೆಗೂ ಕಲ್ಪಿಸಿಲ್ಲ.

ಕಳೆದ ೨೦ ವರ್ಷಗಳ ಹಿಂದೆ ಜಿಲ್ಲಾಡಳಿತ ಪಟ್ಟಿ ಮಾಡಿರು ವಂತೆ ಇಲ್ಲಿ ಅಧಿಕೃತವಾಗಿ ೨೩ ಕುಟುಂಬಗಳಿದ್ದು ಇದೀಗ ಇವು ಮೂರು ಪಟ್ಟು ಹೆಚ್ಚಾಗಿವೆ. ಅಂದರೆ, ಒಂದು ಸೂರಿನೊಳಗೆ ಅಪ್ಪ - ಅಮ್ಮ, ಮಗ - ಸೊಸೆ, ಮಗಳು - ಅಳಿಯ, ಮೊಮ್ಮಕ್ಕಳು ಎಂದುಕೊAಡು ಕನಿಷ್ಟ ೧೦ ರಿಂದ ೨೦ ಮಂದಿ ವಾಸಿಸುತ್ತಿದ್ದಾರೆ.

ಹಗಲು ವೇಳೆ ದಿನವಿಡೀ ಖಾಸಗಿ ಹೊಲ ಗದ್ದೆಗಳು, ತೋಟಗಳಲ್ಲಿ ದುಡಿಯುವ ಈ ಮಂದಿ, ರಾತ್ರಿಯಾಯಿತೆಂದರೆ ಇಡೀ ಕುಟುಂಬ ಸಮೇತ ಹಲವರು ಮದ್ಯದ ಅಮಲಿನಲ್ಲಿ ತೇಲಾಡಿ ಓಲಾಡಿ ಕೊನೆಗೆ ಅವರವರೇ ಜಗಳವಾಡಿಕೊಂಡು ರಾತ್ರಿ ಊಟ ಕೂಡ ಮಾಡದೇ ಸಾಮೂಹಿಕವಾಗಿ ನಿದ್ರೆಗೆ ಜಾರುತ್ತಾರೆ.

ಸೌಲಭ್ಯಗಳ ಬಗ್ಗೆ ಅರಿವಿಲ್ಲ

ಸರ್ಕಾರಗಳ ಫಲಾನುಭವಿಗಳಾದ ಈ ಗಿರಿಜನ ಮಂದಿಗೆ ಸರ್ಕಾರ ನೀಡುವ ಸೌಲಭ್ಯಗಳ ಮಾಹಿತಿ ಇಲ್ಲದ ಈ ಮಂದಿಗೆ ಕೂಲಿ, ಕೂಲಿಯ ಹಣ ಹಾಗೂ ಮದ್ಯ ಈ ಮೂರು ಪ್ರಪಂಚವಾಗಿವೆ. ತಮಗೆ ಮನೆಯನ್ನು ಏಕೆ ಕಟ್ಟಿಕೊಟ್ಟಿಲ್ಲ ? ಇರುವ ಸೂರುಗಳಿಗೆ ಏಕೆ ವಿದ್ಯುತ್ ಕೊಟ್ಟಿಲ್ಲ ? ಮಕ್ಕಳಿಗೆ ಏನೆಲ್ಲಾ ಸೌಲಭ್ಯಗಳಿವೆ ಎಂದು ತಿಳಿಯುವ ಗೋಜಿಗೆ ಹೋಗದ ಈ ಅಮಾಯಕ ಮಂದಿಯ ಮುಗ್ಧತೆ ಸಂಬAಧಿತ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಚುನಾಯಿತರಿಗೆ ವರವಾಗಿದೆ. ಇನ್ನೂ ಕೂಡ ಜಾಗೃತರಾಗದ ಈ ಮಂದಿಗೆ ಜಿಲ್ಲಾಡಳಿತ ಸೂಕ್ತ ಮಾಹಿತಿ ಹಾಗೂ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಲ್ಲಿ ವಿಫಲವಾಗಿದೆ.

ಬಿಲ್ ಆಗದೆ ಅಪೂರ್ಣಗೊಂಡ ಮನೆಗಳು

ಹಾಡಿಯ ಒಂದಷ್ಟು ಮಂದಿಗೆ ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರ ಕಟ್ಟಲು ಮುಂದಾಗಿದ್ದ ಮನೆಗಳಿಗೆ ಸರಿಯಾಗಿ ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆದಾರರು ಮನೆಗಳ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ ಎಂದು ಹಾಡಿಯ ವಾಸಿಗಳಾದ ಹರೀಶ, ರವಿ, ಮಣಿ, ಸ್ವಾಮಿ, ರಂಗ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ದೂರಿಕೊಂಡರು.

ಬೀದಿ ದೀಪದ ಬೆಳಕಿನಲ್ಲಿ ರಾತ್ರಿ ಊಟ

ಇರುವ ಸೂರುಗಳಿಗೆ ಇದೂವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಕತ್ತಲೆಯಲ್ಲೇ ಇದ್ದೇವೆ. ಸೀಮೆ ಎಣ್ಣೆಯನ್ನೂ ನೀಡದ ಕಾರಣ ರಾತ್ರಿ ಚಿಮಣಿ ಹಚ್ಚುವಂತಿಲ್ಲ. ಹಾಗಾಗಿ ಹಾಡಿಯಲ್ಲಿ ಇರುವ ಏಕೈಕ ಬೀದಿ ದೀಪದ ಕೆಳಗೆ ರಾತ್ರಿ ನಾವು ಹತ್ತಿರದ ಐದಾರು ಗುಡಿಸಲುಗಳ ಜನ ಊಟ ಮಾಡುತ್ತೇವೆ. ನಂತರ ಹೋಗಿ ನಮ್ಮ ನಮ್ಮ ಸೂರಿನೊಳಗೆ ಮಲಗುತ್ತೇವೆ ಎಂದು ಹಾಡಿಯ ವಾಸಿಗಳಾದ ಶಾಂತಿ, ಮಣಿ, ಕುಮಾರಿ, ಪುಷ್ಪ, ಸುಮಿ, ರಾಧಾ ಮೊದಲಾದವರು ಹೇಳಿಕೊಂಡರು.

ಮಕ್ಕಳ ಲಾಲನೆ - ಪಾಲನೆ ಇಲ್ಲ

ಗಂಡ - ಹೆಂಡತಿ ಮದ್ಯದ ಅಮಲಿನಲ್ಲಿ ಮಕ್ಕಳ ಹಿತ ಮರೆಯುತ್ತಿದ್ದಾರೆ. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ವಸತಿ ಬಗ್ಗೆ ಗಮನಿಸುತ್ತಿಲ್ಲ. ಹಾಗಾಗಿ ಇಲ್ಲಿನ ಪುಟ್ಟ ಮಕ್ಕಳು ಕೂಡ ಅಲ್ಲಿನ ವಾತಾವರಣಕ್ಕೆ ಒಗ್ಗಿ ಹೋಗಿದ್ದಾರೆ. ಇಡೀ ಹಾಡಿಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ ಮಕ್ಕಳೇ ಸಿಗುತ್ತಿಲ್ಲ. ಹೆಚ್ಚು ಎಂದರೆ ೮ ಅಥವಾ ೯ ನೇ ತರಗತಿಯೇ ಜಾಸ್ತಿ.

ಶಾಲೆಗೆ ಚಕ್ಕರ್ - ಕೂಲಿಗೆ ಹಾಜರ್

ತಂದೆ ತಾಯಿಗೆ ತಾವೇನು ಕಡಿಮೆ ಇಲ್ಲ ಎಂಬAತೆ ೧೨ ವರ್ಷ ದಾಟಿದ ಮಕ್ಕಳು ಶಾಲೆಗೆ ಚಕ್ಕರ್ ಕೊಟ್ಟು ಕೂಲಿಗೆ ಹೋಗುತ್ತಿರುವ ಪ್ರಕರಣಗಳು ಇಲ್ಲಿ ನಡೆಯುತ್ತಿವೆ. ಅಪ್ಪ ಅಮ್ಮನಿಗೆ ನಾವೇನು ಕಡಿಮೆಯಿಲ್ಲ ಎಂಬAತೆ ಬಹುತೇಕ ಎಲ್ಲಾ ಹಾಡಿಗಳ ಮಕ್ಕಳು ಕೂಲಿಗೆ ತೆರಳುತ್ತಿವೆ ಎಂದು ಇಲ್ಲಿನ ಮಂದಿ ಹೇಳುತ್ತಾರೆ. ಅಂದರೆ ಶಾಲೆಗಳಿಗೆ ಹೋಗಿ ಕಡಿದು ಕಟ್ಟೆ ಹಾಕ್ತಾರಾ ? ಇಲ್ಲ ಏನಾದರೂ ಸಂಬಳ ತರ್ತಾರಾ ? ಶಾಲೆ ಬಿಟ್ಟು ದುಡಿದರೆ ಮಾತ್ರ ತಿನ್ನೋಕೆ ಅನ್ನ ಎನ್ನುವ ವಾದ ಇಲ್ಲಿನ ಕೆಲವರದ್ದು.

ಮನೆಗಳ ಬಿಲ್ ಕೊಡಿಸಿ

ಹಾಡಿಯಲ್ಲಿ ಕೆಲವು ಫಲಾನುಭವಿಗಳಿಗೆ ಕಳೆದ ಎರಡು ವರ್ಷಗಳ ಹಿಂದೆ ಮನೆಗಳು ಮಂಜೂರಾಗಿದ್ದವು. ಗುತ್ತಿಗೆದಾರರು ಬಿಲ್ ಆಗಿಲ್ಲ ಎಂದು ಅರ್ಧಕ್ಕೆ ಮನೆಗಳನ್ನು ನಿಲ್ಲಿಸಿದ್ದಾರೆ. ಕೂಡಲೇ ಬಾಕಿ ಇರುವ ಬಿಲ್ ಪಾವತಿಸಿ ಎಂದು ಹಾಡಿಯ ಸ್ವಾಮಿ, ರಾಜಿ, ಸೀತಮ್ಮ, ಕೀರ್ತನಾ, ರವಿ, ಹರೀಶ ಮೊದಲಾದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸೂಕ್ತ ಭೂಮಿ ಕೊಡಿ

ಹಾಡಿಯಲ್ಲಿ ವಾಸವಿರುವ ೨೩ ಕುಟುಂಬಗಳ ಪೈಕಿ ಹತ್ತು ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ೨೦ ಎಕರೆ ಭೂಮಿಯನ್ನು ನೀಡಿದ್ದಾರೆ. ಉಳಿದ ೧೩ ಮಂದಿಗೆ ೨೦೦೬ ರ ಅರಣ್ಯ ಭೂಮಿ ಕಾಯಿದೆ ಪ್ರಕಾರ ಭೂಮಿಯನ್ನು ಹಂಚಲು ಇಲ್ಲಿನ ಜಾಗವನ್ನು ಸರ್ವೆ ಮಾಡಿ ಸ್ಕೆಚ್ ಕೂಡ ಸಿದ್ಧಪಡಿಸಿದ್ದರೂ ಕೂಡ ಇದೂವರೆಗೂ ಭೂಮಿ ಯನ್ನೂ ಕೊಟ್ಟಿಲ್ಲ. ಮನೆಗಳನ್ನೂ ಕೂಡ ನೀಡಿಲ್ಲ. ನಾವೇನು ಮಾಡೋದು ? ಎಂದು ಅಂಗಲಾಚುತ್ತಿದ್ದಾರೆ ಇಲ್ಲಿನ ಅಮಾಯಕ ಮಂದಿ.

ಜಿಲ್ಲಾಡಳಿತ ಗಮನ ಹರಿಸಲಿ

ಕೂಡಲೇ ಈ ಬೆಂಡೆಬೆಟ್ಟ ಗಿರಿಜನ ಹಾಡಿ ಸೇರಿದಂತೆ ಇತರೇ ಗಿರಿಜನ ಹಾಡಿಗಳಿಗೆ ಅಧಿಕಾರಿಗಳ ತಂಡವನ್ನು ನೇಮಿಸಿ ಸೂಕ್ತ ರೀತಿಯ ವರದಿ ತರಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ತುರ್ತಾಗಿ ನೀಡುವ ಮೂಲಕ ನಾವು ಕೂಡ ನಾಗರಿಕ ಸಮಾಜದಲ್ಲಿ ಬದುಕು ವಂತೆ ಮಾಡಲಿ ಎಂದು ಹಾಡಿಯ ನಿವಾಸಿ ಹರೀಶ್, ರವಿ, ಕೀರ್ತನಾ ಮೊದಲಾದವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

- ಕೆ.ಎಸ್. ಮೂರ್ತಿ, ಕಣಿವೆ.