ವೀರಾಜಪೇಟೆ, ನ. ೧: ಕೊಡಗಿನ ಅಕ್ಷರ ದಾಸೋಹ ನೌಕರರು ಬಿಸಿಯೂಟ ಸ್ಥಗಿತಗೊಳಿಸಿ ತಾ. ೬ ರಂದು ಬೆಂಗಳೂರಿನಲ್ಲಿ ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವುದಾಗಿ ನಿರ್ಧರಿಸಿದ್ದು ನೌಕರರ ಸಂಘದ ಪದಾಧಿಕಾರಿಗಳು ವೀರಾಜಪೇಟೆ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರಿಗೆ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಕೆ.ಎ. ಪ್ರಮೀಳ ಮಾತನಾಡಿ, ಬಿಸಿಯೂಟ ನೌಕರರನ್ನು ೬೦ ವರ್ಷ ಆಗಿದೆ ಎಂದು ಕೆಲಸದಿಂದ ತೆಗೆದಿರುವವರಿಗೆ ರೂ. ೧ ಲಕ್ಷ ಹಾಗೂ ನಿವೃತ್ತಿಯಾದವರಿಗೂ ೧ ಲಕ್ಷ ನೀಡಬೇಕು, ಕೊರೊನಾ ಸಂದರ್ಭದಲ್ಲಿ ಬಿಸಿಯೂಟ ನೌಕರರಿಗೆ ಸರಕಾರದ ಸೌಲಭ್ಯಗಳು ದೊರಕಬೇಕು. ಕಳೆದ ಮೂರು ತಿಂಗಳಿನಿAದ ವೇತನ ಬಂದಿಲ್ಲ ಸೇರಿದಂತೆ ಇನ್ನಿತರ ಬೇಡಿಕೆ ಮುಂದಿಟ್ಟರು.
ಮನವಿ ಸ್ವೀಕರಿಸಿದ ಶಾಸಕ ಪೊನ್ನಣ್ಣ, ಈ ವಿಚಾರ ಹಾಗೂ ನಿಮ್ಮ ಬೇಡಿಕೆಯ ಬಗ್ಗೆ ಮುಖ್ಯ ಮಂತ್ರಿಗಳು ಹಾಗೂ ಸಂಬAಧಪಟ್ಟ ಸಚಿವರೊಂದಿಗೆ ಮಾತನಾಡಿ ಬಗೆಹರಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಮನವಿ ಸಲ್ಲಿಸುವ ಸಂದರ್ಭ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕುಸುಮ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಭವ್ಯ, ಪೊನ್ನಂಪೇಟೆ ಅಧ್ಯಕ್ಷೆ ಜಯಂತಿ, ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು, ಹಸೀನಾ, ಉಮ್ಮಕ್ಕ ಹಾಜರಿದ್ದರು.