ಶನಿವಾರಸಂತೆ, ಅ. ೩೧: ಸಮೀಪದ ಕೊಡ್ಲಿಪೇಟೆ ಪಟ್ಟಣದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಜೂನಿಯರ್ ಕಾಲೇಜಿನಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೯೯೫ ರಿಂದ ೧೯೯೮ ರವರೆಗೆ ಪ್ರೌಢಶಾಲಾ ಶಿಕ್ಷಣ ವ್ಯಾಸಂಗ ಮಾಡಿದಂತಹ ಹಳೇ ವಿದ್ಯಾರ್ಥಿಗಳು ತಮ್ಮ ತಮ್ಮ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿದರು.
ಮಧ್ಯಾಹ್ನ ಶಾಂತಮಲ್ಲಪ್ಪ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಅತಿಥಿಗಳ ಒಡಗೂಡಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಬಾಲ್ಯ ಕಾಲದ ಅನುಭವಗಳು ಜೀವನದುದ್ದಕ್ಕೂ ಸವಿನೆನಪುಗಳಾಗಿ ಉಳಿದಿರುತ್ತವೆ ಎಂದರು.
ಮುಖ್ಯ ಅತಿಥಿ ಇಪ್ತೇಖಾರ್ ಪಾಷ ಪ್ರಾಸ್ತಾವಿಕ ನುಡಿಯಾಡಿದರು. ವಕೀಲ ಕೃಷ್ಣಕುಮಾರ್, ನಿವೃತ್ತ ಶಿಕ್ಷಕಿ ಅರ್ಜುಮನ್, ಶಿಕ್ಷಕಿ ಮೀನಾಕ್ಷಿ, ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಪವಾರ್, ಮುಖ್ಯಶಿಕ್ಷಕ ಅಬ್ದುಲ್ ರಬ್, ಇತರ ಶಿಕ್ಷಕರು ಮಾತನಾಡಿದÀರು.
ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕರು, ವಿದ್ಯಾರ್ಥಿಗಳನ್ನು ಸ್ಮರಿಸಿ ಮೌನಾಚರಣೆ ಮಾಡಲಾಯಿತು. ನಿವೃತ್ತ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾಗಿ ಅರುಣಾ ಚಂದ್ರಮೌಳಿ, ಲಲಿತಾ, ಡಾ.ಮಹಾದೇವಪ್ಪ, ವಲ್ಲಳ್ಳಿ ದಯಾನಂದ್, ನಾಗೇಶ್ ಗೌಡ, ಡಾ. ಉದಯಕುಮಾರ್, ಜಿಯಾ, ಫೈಜನ್ ಇದ್ರೀಸ್, ಇತರರು ಉಪಸ್ಥಿತರಿದ್ದರು.