ಕುಶಾಲನಗರ, ಅ. ೩೧: ಒಂದೇ ಜಾತಿ, ಮತ, ದೇವರು ಎನ್ನುವ ಮಾನವತಾ ಸಂದೇಶ ಪ್ರಸಕ್ತ ಪರಿಸ್ಥಿತಿಯಲ್ಲಿ ಅನಿವಾರ್ಯ ವಾಗಿದೆ ಎಂದು ಹಿಂದೂ ಮುಖಂಡ ಹಾಗೂ ಶ್ರೀ ಗುರು ನಾರಾಯಣ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಮತ್ತು ಗುರು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದಲ್ಲಿ ಮೇಲು ಕೀಳು ಎಂಬ ಅನಿಷ್ಠ ಪದ್ಧತಿಯಿಂದ ತಳಮಟ್ಟದ ಮಾನವ ಸಮುದಾಯ ನಲುಗಿ ಹೋಗಿದೆ. ಈ ಸಂದರ್ಭ ಮಹಾನ್ ಮಾನವತಾವಾದಿ ಶ್ರೀ ನಾರಾಯಣ ಗುರುಗಳು ನೀಡಿದ ಸಂದೇಶ ನಾಡಿಗೆ ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಸಮಾಜಕ್ಕೆ ಅಗತ್ಯವಿರುವ ಸಹಕಾರವನ್ನು ಸರ್ಕಾರದ ಮೂಲಕ ಒದಗಿಸುವ ಭರವಸೆ ನೀಡಿದರು.

ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಸಮುದಾಯದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಸಮಾಜದ ಗೌರವಾಧ್ಯಕ್ಷರಾದ ಪಿ.ಬಿ. ಗಂಗಾಧರ್, ಉಪಾಧ್ಯಕ್ಷರಾದ ಕೆ. ಕುಸುಮಾವತಿ, ಕಾರ್ಯದರ್ಶಿ ಅಣ್ಣು ಪೂಜಾರಿ, ಖಜಾಂಚಿ ಬಿ.ಎ. ಆಶಾ ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಪ್ರಮುಖರು ಮತ್ತು ಕೋಟಿ ಚೆನ್ನಯ ಬಿಲ್ಲವ ಸಮಾಜದ ನಿರ್ದೇಶಕರುಗಳು ಇದ್ದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಶ್ರೀ ನಾರಾಯಣ ಗುರು ಮತ್ತು ಕೋಟಿ ಚೆನ್ನಯರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಹಾಲಿ ಮತ್ತು ನಿವೃತ್ತ ಸರಕಾರಿ ನೌಕರರಿಗೆ ಸನ್ಮಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.