ವರದಿ : ಅಂಚೆಮನೆ ಸುಧಿ
*ಸಿದ್ದಾಪುರ ಅ. ೩೦: ಇಡೀ ಭಾರತವನ್ನು ಸ್ವಚ್ಛವಾಗಿಡಬೇಕೆನ್ನುವ ಕನಸು ಕಂಡಿದ್ದ ಮಹಾತ್ಮ ಗಾಂಧಿ ಅವರ ಹೆಸರಿಗೆ ಕಳಂಕ ಎಂಬAತೆ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಎಂ.ಜಿ (ಮಹಾತ್ಮ ಗಾಂಧಿ) ರಸ್ತೆಯಲ್ಲಿ ಕಸದ ರಾಶಿ ಕೊಳೆತು ನಾರುತ್ತಿದೆ. ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಸ್ವಚ್ಛತೆ ಕಾಪಾಡುವಂತೆ ಆರೋಗ್ಯ ಕೇಂದ್ರದ ವೈದ್ಯರೇ ಗ್ರಾ.ಪಂ ಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ.
ಸಿದ್ದಾಪುರ ಕೊಡಗು ಜಿಲ್ಲೆಯಲ್ಲೇ ೨೪ ಸದಸ್ಯರನ್ನೊಳಗೊಂಡ ಅತ್ಯಂತ ದೊಡ್ಡ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಾತ್ರದಂತೆ ಆದಾಯದ ಗಾತ್ರವೂ ದೊಡ್ಡದೇ ಇದೆ, ಆದರೆ ಇಲ್ಲಿಯವರೆಗೆ ಬಂದಿರುವ ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ಆಡಳಿತ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ. ಸಿದ್ದಾಪುರ ಗ್ರಾ.ಪಂ.ನ್ನು ಕಳೆದ ಒಂದೂವರೆ ದಶಕದಿಂದ ಕಸದ ಸಮಸ್ಯೆ ಕಾಡುತ್ತಿದೆ. ವೈಜ್ಞಾನಿಕ ರೂಪದ ಕಸ ವಿಲೇವಾರಿಯಲ್ಲಿ ಪಂಚಾಯ್ತಿ ವಿಫಲವಾಗುತ್ತಲೇ ಬರುತ್ತಿದೆ.
ತ್ಯಾಜ್ಯವನ್ನು ಹಾಕಲು ಸೂಕ್ತ ಜಾಗ ಗುರುತಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಆಡಳಿತ ವ್ಯವಸ್ಥೆಯಿಂದ ಗ್ರಾಮಸ್ಥರು ಹಾಗೂ ವರ್ತಕರು ಸಂಕಷ್ಟ ಎದುರಿಸುತ್ತಲೇ ಬರುತ್ತಿದ್ದಾರೆ. ಇಲ್ಲಿಯವರೆಗೆ ಬಂದ ಹಿರಿಯ ಅಧಿಕಾರಿಗಳೆಲ್ಲರೂ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸುವಂತೆ ಪಂಚಾಯ್ತಿಗೆ ಸೂಚನೆ ನೀಡುತ್ತಲೇ ಬಂದಿದ್ದಾರೆ. ಸರ್ಕಾರಿ ಜಾಗ ಸಿಗದಿದ್ದರೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಖಾಸಗಿ ಜಾಗವನ್ನಾದರು ಬಳಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಆದರೆ ಇಲ್ಲಿಯವರೆಗೆ ಬಂದ ಆಡಳಿತ ವ್ಯವಸ್ಥೆಗಳೆಲ್ಲವೂ ಈ ನಿಟ್ಟಿನಲ್ಲಿ ಕ್ರಮವಹಿಸದೆ ಕೈಚೆಲ್ಲಿ ಕುಳಿತ ಪರಿಣಾಮ ಇಂದು ಗ್ರಾಮ ದುರ್ವಾಸನೆಯಿಂದ ಕೂಡಿದೆ. ಮನೆ ಮನೆ ಕಸ ಸಂಗ್ರಹಕ್ಕೆ ವಾಹನವನ್ನು ನೀಡಿದ್ದರೂ ಮತ್ತು ನಿರ್ವಹಣೆಗೆ ಅನುದಾನ ಬಿಡುಗಡೆಯಾಗುತ್ತಿದ್ದರೂ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಈ ಅವ್ಯವಸ್ಥೆಯಿಂದ ಬೇಸತ್ತು ಜನ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಎಂ.ಜಿ ರಸ್ತೆ ಮತ್ತು ಮಾರುಕಟ್ಟೆ ಭಾಗ ಕೊಳೆತು ನಾರುತ್ತಿದೆ. ತ್ಯಾಜ್ಯ ತುಂಬಾ ಹುಳಗಳಾಗಿದ್ದು, ರೋಗ ಭೀತಿ ಉಂಟಾಗಿದೆ. ಬೀದಿ ನಾಯಿ ಮತ್ತು ಹೆಗ್ಗಣಗಳ ಹಾವಳಿ ನಿರಂತರವಾಗಿದೆ. ಸೊಳ್ಳೆ ಮತ್ತು ನೊಣಗಳ ಕಿರುಕುಳದಿಂದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ.
ಪಕ್ಕದಲ್ಲೇ ಶಾಲೆ ಕೂಡ ಇದ್ದು, ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಕೂಡ ಅಸಾಧ್ಯವಾಗಿದೆ. ರೋಗ ಹರಡುವ ಕುರಿತು
(ಮೊದಲ ಪುಟದಿಂದ) ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾ.ಪಂ ಮಾತ್ರ ನಿದ್ರಾವಸ್ಥೆಯಿಂದ ಎಚ್ಚರಗೊಂಡಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು, ಕ್ಷೇತ್ರದ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.
ಆತಂಕಕಾರಿ ಬೆಳವಣಿಗೆ: ಕಳೆದ ೧೦ ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಅಧಿಕಾರಕ್ಕೆ ಬಂದ ಯಾವುದೇ ಆಡಳಿತ ವ್ಯವಸ್ಥೆ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಾಶ್ವತ ಪರಹಾರಕ್ಕಾಗಿ ಯೋಜನೆ ರೂಪಿಸುವಂತೆ ಕಳೆದ ಅನೇಕ ವರ್ಷಗಳಿಂದ ಹಿರಿಯ ಅಧಿಕಾರಿಗಳು ಸಲಹೆ ನೀಡಿದರೂ ಆಡಳಿತ ನಡೆಸುವವರು ಏನನ್ನೂ ಮಾಡಿಲ್ಲ. ಇದೀಗ ಖುದ್ದು ವೈದ್ಯರೇ ಸಾಂಕ್ರಾಮಿಕ ರೋಗದ ಭೀತಿಯಿಂದ ಸ್ವಚ್ಛತೆ ಕಾಪಾಡುವಂತೆ ಗ್ರಾ.ಪಂ ಗೆ ಪತ್ರ ಬರೆದಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿದೆ, ಸಿದ್ದಾಪುರದಲ್ಲಿ ಸ್ವಚ್ಛತೆ ಎನ್ನುವುದು ಕನಸಾಗಿದೆ. ಎಂದು ಕಾರ್ಮಿಕ ಸಂಘಟನೆ ಮುಖಂಡ ಪಿ.ಆರ್.ಭರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಗ್ಗಣಗಳ ಕಾಟ: ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಶುಚಿತ್ವದ ವಾತಾವರಣ ಇರುವುದರಿಂದ ಹೆಗ್ಗಣಗಳ ಹಾವಳಿ ಮಿತಿ ಮೀರಿದೆ. ಹೆಗ್ಗಣಗಳ ಹಾವಳಿಯಿಂದ ವ್ಯಾಪಾರಿಗಳಿಗೆ ಹೆಚ್ಚು ನಷ್ಟವಾಗುತ್ತಿದೆ. ಬೀದಿ ನಾಯಿಗಳು ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನಗಳ ಮೇಲೆರಗುತ್ತಿವೆ. ಗ್ರಾಮದಲ್ಲಿ ಆತಂಕದ ವಾತಾವರಣವಿದೆ ಗ್ರಾ.ಪಂ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಮಾರುಕಟ್ಟೆ ವ್ಯಾಪಾರಿ ಅನೀಫ್ ಒತ್ತಾಯಿಸಿದ್ದಾರೆ.