ಶನಿವಾರಸAತೆ, ಅ. ೩೦ : ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಮೋಡ ಕವಿದ ವಾತಾವರಣವಿದ್ದು, ಸಂಜೆ ಹೊತ್ತಿಗೆ ಮಳೆ ಸುರಿಯಬಹುದು ಎಂಬ ನಿರೀಕ್ಷೆ ರೈತರದಾಗಿತ್ತು. ಸಮೀಪದ ಯಸಳೂರು ಹೋಬಳಿಯ ಕಳಲೆ, ಈಚಲು ಬೀಡು, ಹನಸೆ ಇತರ ಗ್ರಾಮಗಳಲ್ಲಿ ೧೫ ಸೆಂಟ್ ಮಳೆಯಾಗಿದೆ.
ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ನಂತರ ಸಂಜೆಯವರೆಗೂ ಮೋಡ ಕವಿದ ವಾತಾವರಣವಿದ್ದು ಇದ್ದಕ್ಕಿದ್ದಂತೆ ೬ ಗಂಟೆಗೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಜೋರಾಗಿ ಮಳೆ ಸುರಿಯಿತು. ಮುಕ್ಕಾಲು ಇಂಚು ಮಳೆಯಾಗಿದ್ದು ಕಳೆದೆ ರೆಡು ವಾರಗಳಿಂದ ಉತ್ತಮ ಮಳೆಗಾಗಿ ಹಂಬಲಿಸುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಗದ್ದೆಗಳಲ್ಲಿ ಭತ್ತದ ಪೈರು ಬೆಳೆದು ನಿಂತಿದ್ದು ಭಾನುವಾರ ಸಂಜೆ ಸುರಿದ ಮಳೆಯಿಂದ ತೆನೆ ಮೂಡುತ್ತಿದೆ. ಕಾಫಿ, ಕಾಳುಮೆಣಸು ಹಣ್ಣಾಗಲು ಮಳೆ ಅನುಕೂಲವಾಗಿದೆ. ಶುಂಠಿ ಬೆಳೆಗೂ ಒಳ್ಳೆಯದು. ಧಾರಾಕಾರ ಸುರಿಯದೇ ಹದವಾಗಿ ಮಳೆಯಾದರೆ ಎಲ್ಲಾ ಬೆಳೆಗೂ ಉತ್ತಮ. ಮಾರುಕಟ್ಟೆಯಲ್ಲಿ ೬೦ ಕೆ.ಜಿ. ಶುಂಠಿ ತುಂಬಿದ ಚೀಲಕ್ಕೆ ರೂ. ೪,೨೦೦-೪,೫೦೦ರ ದರವಿದ್ದು ತಟಸ್ಥವಾಗಿತ್ತು. ಹೀಗೆ ಹದವಾಗಿ ಮಳೆಯಾದರೇ ದರ ಹೆಚ್ಚಾಗಬಹುದು ಎಂದು ಕಾಜೂರು ಗ್ರಾಮದ ಪ್ರಗತಿಪರ ರೈತ ಚಂದ್ರಣ್ಣ ಆಶಾಭಾವನೆ ವ್ಯಕ್ತಪಡಿಸಿದರು.
ಪ್ರಸ್ತುತ ಸ್ವಾತಿ ಮಳೆ ನಕ್ಷತ್ರ ಜೋರಾಗಿ ಸುರಿಯುವುದಿಲ್ಲ. ಇದು ಚಂಡಮಾರುತದ ಪರಿಣಾಮ. ಒಟ್ಟಿನಲ್ಲಿ ಮಳೆ ಹೀಗೆ ಹದವಾಗಿ ಸುರಿದರೆ ಕೊಯ್ಲು ಸಮಯಕ್ಕೆ ಉತ್ತಮ ಫಸಲನ್ನು ನಿರೀಕ್ಷಿಸಬಹುದು ಎಂಬ ಅಭಿಪ್ರಾಯ ರೈತರದು.