ಶ್ರೀಮಂಗಲ, ಅ. ೩೦: ನಮ್ಮ ಸಂಸ್ಕೃತಿ ಈ ಭೂಮಿಯ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದರೆ ಈ ಭೂಮಿಯೊಂದಿಗೆ ಪೂರ್ವಜರು ಹಾಗೂ ಹಿರಿಯರು ಹೊಂದಿದ್ದAತಹ ಪೂಜ್ಯನೀಯ ಬಾಂಧವ್ಯವನ್ನು ನಾವು ಕೂಡ ಅನುಕರಿಸಬೇಕು ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಟಿ. ಶೆಟ್ಟಿಗೇರಿಯಲ್ಲಿ ಇಲ್ಲಿನ ಮೂಂದ್ನಾಡ್ ಕೊಡವ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವ ಸೇವಾ ಸಮಿತಿ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ, ಕೊಡವ ತಕ್ಕ್ ಎಳ್ತ್'ಕಾರಡ ಕೂಟ ಇವುಗಳ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ೭ನೇ ವರ್ಷದ ಕಾವೇರಿ ಚಂಗ್ರಾAದಿ ಪತ್ತಾಲೋದಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ೧೦ನೇ ದಿನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷರಾದ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಕೊಡಗಿನಲ್ಲಿ ಪಾಳು ಬಿದ್ದಿರುವ ಸಹಸ್ರಾರು ಏಕರು ಭತ್ತದ ಗದ್ದೆಗಳನ್ನು ಕೃಷಿ ಭೂಮಿಯಾಗಿ ಸಂರಕ್ಷಣೆ ಮಾಡಲು ಮರುಕೃಷಿ ಮಾಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮತ್ತು ಈ ಮೂಲಕ ಅಂತರ್ಜಲ ವೃದ್ಧಿಸುವ ಯೋಜನೆಯನ್ನು ಸರಕಾರ ಜಾರಿಗೊಳಿಸಿ ಸಹಾಯಧನವನ್ನು ನೀಡಬೇಕೆಂದು ನೀಡಿದ ಮನವಿ ಸ್ವೀಕರಿಸಿ ಪೊನ್ನಣ್ಣ ಮಾತನಾಡಿದರು.
ನಾವು ಆಟವಾಡುತ್ತಿದ್ದ ಭತ್ತದ ಗದ್ದೆಗಳಲ್ಲಿ ವಾಣಿಜ್ಯ ಕಟ್ಟಡ, ಲೇಔಟ್ ನಿರ್ಮಾಣವಾಗುತ್ತಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಆಗುತ್ತಿರುವ ಆತಂಕದ ಬಗ್ಗೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಸಹ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಗದ್ದೆಗಳನ್ನು ಸೈಟ್ ಮಾಡಿ ಮನೆ ಕಟ್ಟಿದರೆ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ. ಆಗ ಜನಪ್ರತಿನಿಧಿಗಳನ್ನು- ಸರಕಾರವನ್ನು ಜನರು ದೂಷಿಸುತ್ತಾರೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಕೊಡಗಿನ ಪರಿಸರವನ್ನು ನಾವು ಅನುಭವಿಸುತ್ತಾ ಬಂದಿದ್ದೇವೆ. ಇದು ನಮ್ಮ ಸ್ವಂತ ಅಲ್ಲ. ನಾವು ಕಾಪಾಡುವ ಭರವಸೆಯಿಂದ ಪೂರ್ವಜರು ಬಳುವಳಿಯಾಗಿ ನೀಡಿದ ಈ ನೆಲವನ್ನು ಹಾಳು ಮಾಡದೇ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು ಎಂದರು. ಹಿರಿಯರು ಸಂಘ ಸಂಸ್ಥೆಗಳು ಈ ಬಗ್ಗೆ ಚಿಂತನೆ ಮಾಡಬೇಕು. ಕೊಡಗಿನ ಕೃಷಿ ಭೂಮಿಗೆ ಒಳಿತಾಗುವ ಒಮ್ಮತದ ನಿಲುವು ವ್ಯಕ್ತವಾದರೆ ಕೃಷಿ ಭೂಮಿಯ ಸಂರಕ್ಷಣೆಗೆ ಬದ್ಧ ಎಂದು ನುಡಿದರು.
ಕೊಡವರ ಬಗ್ಗೆ ಎಲ್ಲರಿಗೂ ಪ್ರೀತಿ ಗೌರವವಿದೆ. ಇನ್ನೊಂದು ಜನಾಂಗ- ಧರ್ಮವನ್ನು ದ್ವೇಷಿಸುವ ಮನೋಭಾವ ಬೆಳೆಸಿಕೊಳ್ಳಬಾರದು. ಹಾಗೆಯೇ ಚುನಾವಣೆ ಸಮಯದಲ್ಲಿ ರಾಜಕೀಯ ಬರುತ್ತದೆ, ಆದರೆ ನಂತರದಲ್ಲಿ ರಾಜಕೀಯ ದ್ವೇಷ ಬೆಳೆಸಿಕೊಳ್ಳದೇ ರಾಜಕೀಯ ಮನಸ್ಥಿತಿಯಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದ ಅವರು ನಮ್ಮ ಸಂಸ್ಕೃತಿಯ ಸಂರಕ್ಷಣೆ, ಹಕ್ಕುಗಳನ್ನು ಪಡೆಯಲು ಸರಕಾರದ ಮೇಲೆ ಒತ್ತಡ ಹಾಕಲು ಜನಾಂಗದಲ್ಲಿ ಒಗ್ಗಟ್ಟು ಅಗತ್ಯ ಎಂದರು.
ಸಾAಸ್ಕೃತಿಕ ಸಮಿತಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ೫೩ ಜನಾಂಗ ಮತ್ತು ಆ ಜನಾಂಗದ ಭಾಷೆ ಅಳಿವಿನ ಅಂಚಿನಲ್ಲಿದ್ದು, ಇದರಲ್ಲಿ ‘ಕೊಡವ’ ಸಹ ಸೇರಿರುವುದು ಆತಂಕಕಾರಿ. ಕೊಡವರು ಹಲವು ದಶಕಗಳಿಂದ ದಸರಾ, ಗೌರಿ ಗಣೇಶ ಹಬ್ಬಗಳನ್ನು ಅತ್ಯಂತ ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದಾರೆ. ಆದರೆ ತಮ್ಮದೆ ಜನಾಂಗದ ಹಬ್ಬಗಳ ಆಚರಣೆಯಲ್ಲಿ ಆಸಕ್ತಿ ತೋರುತಿಲ್ಲ. ಆದ್ದರಿಂದ ಚಂಗ್ರಾAದಿ ಪತ್ತಾಲೋದಿ ಹಬ್ಬವನ್ನು ೧೦ ದಿನಗಳ ಕಾಲ ವಿಶಿಷ್ಟವಾಗಿ ಆಚರಿಸುವ ಮೂಲಕ ಕೊಡವ ಭಾಷೆ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ವೇದಿಕೆಯಲ್ಲಿ ದಾನಿ ಕೈಬುಲೀರ ಪಾರ್ವತಿ ಬೋಪಯ್ಯ, ಕೊಡವ ಸಮಾಜದ ಮಾಜಿ ನಿರ್ದೇಶಕ ತೀತಿರ ಧರ್ಮಜ ಉತ್ತಪ್ಪ, ರೂಟ್ಸ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಕೇಚೆಟ್ಟಿರ ಮಮತಾ ಅರುಣ್, ತೀತಿರ ಮೀನಾ ಸತೀಶ್ ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಕೊಡವ ಸಮಾಜದ ಅಧ್ಯಕ್ಷ ಹರೀಶ್ ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲAಡ ಸತೀಶ್, ಕ್ರೀಡಾ ಸಮಿತಿಯ ಅಧ್ಯಕ್ಷ ತಡಿಯಂಗಡ ಶಮ್ಮಿ, ನಿರ್ದೇಶಕರುಗಳಾದ ಚಂಗುಲAಡ ಅಶ್ವಿನಿ ಸತೀಶ್, ಆಂಡಮಾಡ ಸತೀಶ್, ಮುಕ್ಕಾಟಿರ ಸಂದೀಪ್, ತೀತಿರ ಅನಿತಾ ಸುಬ್ಬಯ್ಯ, ಬೊಳ್ಳೆರ ಅಪ್ಪುಟ ಪೊನ್ನಪ್ಪ, ಕರ್ನಂಡ ರೂಪ ದೇವಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ, ದಾನಿ ಪಾರ್ವತಿ ಬೋಪಯ್ಯ, ಸಮಾಜದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರವಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಲ್ಕು ಸಣ್ಣ ನಾಟಕ ಪ್ರದರ್ಶನ, ನೃತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕಿಕ್ಕಿರಿದು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಚಂಗುಲAಡ ಅಶ್ವಿನಿ ಸತೀಶ್ ಅವರು ಪ್ರಾರ್ಥಿಸಿ, ಮಚ್ಚಮಾಡ ಸುಮಂತ್ ಸ್ವಾಗತಿಸಿ, ಕೋಟ್ರಮಾಡ ಸುಮಂತ್ ಮಾದಪ್ಪ ವಂದಿಸಿದರು.