ಶನಿವಾರಸಂತೆ, ಅ. ೨೩: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶನಿವಾರ ಬೆಳಿಗ್ಗೆ ನವರಾತ್ರಿಯ ೭ ನೇ ದಿನ ನವದುರ್ಗೆಯರ ಸಪ್ತಮಿ ಸ್ವರೂಪ ಶ್ರೀ ಕಾಳರಾತ್ರಿ ದೇವಿಯ ಆರಾಧನಾ, ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಟ್ಟಿತು.

ಕ್ಷೇತ್ರ ಜಾಗದ ಉಮಾವತಿ ಗಂಗಪ್ಪ ಕರ್ಕೇರ ಕುಟುಂಬಸ್ಥರ ಸೇವಾರ್ಥದೊಂದಿಗೆ, ಕಟ್ಟಡ ಕಾರ್ಮಿಕರ ಕಚೇರಿ ಉದ್ಯೋಗಿ ಲತಾ ಹಾಗೂ ಭಕ್ತಾದಿಗಳು ಕಾಳರಾತ್ರಿ ದೇವಿ, ಚಾಮುಂಡೇಶ್ವರಿ ದೇವಿ ಮತ್ತು ಗುಳಿಗ ದೈವಕ್ಕೆ ನಾನಾ ಬಗೆಯ ಹೂಗಳು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿದರು. ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು. ಯುವ ಅರ್ಚಕ ಉದಯ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು, ಪೂಜಾ ಕಾರ್ಯ ಸಂಪನ್ನವಾಯಿತು.