ಸೋಮವಾರಪೇಟೆ, ಅ. ೨೩: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಆಯುಧ ಪೂಜೋತ್ಸವವು ಸಾವಿರಾರು ಮಂದಿಯ ಭಾಗವಹಿಸುವಿಕೆಯಿಂದ ಜನೋತ್ಸವದಂತೆ ಜರುಗಿತು.

ಸ್ಥಳೀಯ ಪ್ರತಿಭೆಗಳಿಂದ ಹಿಡಿದು ರಾಜ್ಯಮಟ್ಟದಲ್ಲಿ ಗಮನ ಸೆಳೆದ ಪ್ರತಿಭಾನ್ವಿತ ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯ, ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಎಲ್ಲರೂ ಸಂಭ್ರಮಿಸಿದರು. ಮೋಟಾರ್ ಯೂನಿಯನ್‌ನಿಂದ ಪ್ರತಿ ವರ್ಷ ಆಯೋಜನೆಗೊಳ್ಳುವ ಆಯುಧ ಪೂಜೋತ್ಸವವು ಈ ಭಾಗದ ಜನೋತ್ಸವದಂತೆ ನಡೆಯುತ್ತಿದ್ದು, ಮಕ್ಕಳು, ಮಹಿಳೆಯರಾದಿಯಾಗಿ ಯುವ ಸಮುದಾಯ ಕಲಾಸಂಭ್ರಮದಲ್ಲಿ ಭಾಗಿಯಾಗಿತ್ತು.

ಆಯುಧ ಪೂಜೋತ್ಸವಕ್ಕೆ ಸೋಮವಾರಪೇಟೆ ಪಟ್ಟಣವನ್ನು ಮೋಟಾರ್ ಯೂನಿಯನ್‌ನ ಪದಾಧಿಕಾರಿಗಳು ಸಿಂಗರಿಸಿದ್ದರು. ಎಲ್ಲೆಡೆ ತಳಿರು ತೋರಣ, ಪ್ರತಿಮೆಗಳಿಗೆ ಅಲಂಕಾರ, ದೀಪಾಲಂಕಾರ ಮಾಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದರು.

ಮಧ್ಯಾಹ್ನ ಸಾವಿರಾರು ಮಂದಿಗೆ ಸಂಘದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಇಂದು ಬೆಳಿಗ್ಗೆ ಮೋಟಾರ್ ಯೂನಿಯನ್ ಕಚೇರಿಯಲ್ಲಿ ಅಧ್ಯಕ್ಷ ಕೆ.ಜಿ. ಸುರೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ನಂತರ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ನಂತರ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯುಧ ಪೂಜೋತ್ಸವ-ನೃತ್ಯ ಸ್ಪರ್ಧೆಯ ಉದ್ಘಾಟನೆ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆಯ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಹಬ್ಬಾಚರಣೆಗಳು ಸಂಭ್ರಮ ಹಾಗೂ ಸಾಮರಸ್ಯದ ಭೂಮಿಕೆಯಾಗಿದೆ. ಸಾಮೂಹಿಕ ಆಚರಣೆಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಮೋಟಾರು ಯೂನಿಯನ್‌ನಿಂದ ಪ್ರತಿ ವರ್ಷ ಸಾಮೂಹಿಕ ಆಯುಧ ಪೂಜೋತ್ಸವ, ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಇAದು ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗ್ರಾಮೀಣ ಪ್ರತಿಭೆಗಳು ತಮ್ಮ ಛಾಪನ್ನು ಮೂಡಿಸುತ್ತಿರುವುದು ಗಮನಾರ್ಹ. ಇಂಥಹ ಪ್ರತಿಭೆಗಳಿಗೆ ಅವಕಾಶ ಕೊಡುವುದರೊಂದಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ಸಮಾಜದಲ್ಲಿ ಚಾಲಕರಿಗೆ ಮಹತ್ತರವಾದ ಜವಾಬ್ದಾರಿ ಇದೆ. ಅದನ್ನು ಅರಿತು ನಡೆಯಬೇಕು ಎಂದು ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಜೆ. ದೀಪಕ್, ಚೌಡ್ಲು ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಟಿ. ಪರಮೇಶ್, ನಿವೃತ್ತ ಕಮಾಂಡರ್ ಮಂಜುನಾಥ್ ಅವರುಗಳು ಮಾತನಾಡಿದರು.

ಈ ಸಂದರ್ಭ ಸಂಘದ ಹಿರಿಯ ಸದಸ್ಯರುಗಳಾದ ಹಾಲಪ್ಪ, ಪರಮೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಂತರ ನಡೆದ ನೃತ್ಯ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೃತ್ಯ ತಂಡಗಳಿAದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಲಂಕೃತ ವಾಹನ, ವರ್ಕ್ಶಾಪ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಾತ್ರಿ ಬೆಂಗಳೂರಿನ ವಿ.ಪಿ. ಈವೆಂಟ್ಸ್ ತಂಡದಿAದ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸಂಭ್ರಮಿಸಿದರು. ಕಿರುತೆರೆಯ ಸರಿಗಮಪ ಕಲಾವಿದರಿಂದ ಮೂಡಿಬಂದ ರಸಮಂಜರಿ ಕಾರ್ಯಕ್ರಮ ಹೆಚ್ಚಿನ ಮನೋರಂಜನೆ ನೀಡಿತು.