ಮಡಿಕೇರಿ, ಅ. ೨೩: ನಾಡಹಬ್ಬ ದಸರಾದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ವಿಜಯದಶಮಿಯ ದಿನವಾದ ತಾ.೨೪ರ ಮಂಗಳವಾರದAದು (ಇಂದು) ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ದಕ್ಷಿಣ ಕೊಡಗಿನ ಪ್ರಮುಖ ಕೇಂದ್ರವಾದ ಗೋಣಿಕೊಪ್ಪಲುವಿನಲ್ಲಿ ವೈಭವದ ಶೋಭಾಯಾತ್ರೆ ಜನಮನ ಸೆಳೆಯಲಿದೆ.
ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿರುವ ಮಡಿಕೇರಿ ಹಾಗೂ ಮಡಿಕೇರಿಯಷ್ಟೇ ಆಕರ್ಷಣೆ ಪಡೆದುಕೊಂಡು ಬರುತ್ತಿರುವ ಗೋಣಿಕೊಪ್ಪಲು ಪಟ್ಟಣ ಇದೀಗ ನವವಧುವಿನಂತೆ ಶೃಂಗಾರಗೊAಡಿದೆ. ಎರಡೂ ಕಡೆಗಳಲ್ಲಿ ಅಂಗಡಿ-ಮುAಗಟ್ಟುಗಳು, ಕಟ್ಟಡಗಳು, ಸರಕಾರಿ ಕಚೇರಿಗಳು ವಿದ್ಯುತ್ ಅಲಂಕಾರದೊAದಿಗೆ ಕಂಗೊಳಿಸುತ್ತಿದೆ. ಯಶಸ್ವಿ ದಸರಾ ಆಚರಣೆಗೆ ದಸರಾ ಸಮಿತಿಯ ಪದಾಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಕಲ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಮಡಿಕೇರಿ ನಗರದಲ್ಲಿ ಪ್ರವಾಸಿಗರು ತುಂಬಿದ್ದು, ಜನ-ವಾಹನ ದಟ್ಟಣೆ ಅಧಿಕಗೊಂಡಿದೆ. ಗೋಣಿಕೊಪ್ಪಲು ಪಟ್ಟಣವೂ ಇದಕ್ಕೆ ಹೊರತಾಗಿಲ್ಲ. ಹೋಂಸ್ಟೇ, ಲಾಡ್ಜ್, ರೆಸಾರ್ಟ್ಗಳು ಭರ್ತಿಯಾಗಿದ್ದು, ಈ ಬಾರಿ ಹೆಚ್ಚಿನ ಜನರು ದಸರಾ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಮಡಿಕೇರಿ ದಸರಾಕ್ಕೆ ದಶಮಂಟಪಗಳ ಶೋಭಾಯಾತ್ರೆ ವಿಶೇಷ ಮೆರುಗು ನೀಡುತ್ತದೆ. ಈಗಾಗಲೇ ಆಯಾ ಮಂಟಪ ಸಮಿತಿಯವರು ತಮ್ಮ ತಮ್ಮ ಮಂಟಪಗಳ ತಯಾರಿಕೆಯ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾರೆ. ಗೋಣಿಕೊಪ್ಪಲುವಿನಲ್ಲೂ ಕೂಡ ಮಡಿಕೇರಿ ಮಾದರಿಯ ಶೋಭಾಯಾತ್ರೆ ಗಮನ ಸೆಳೆಯಲಿದ್ದು, ಇಲ್ಲೂ ಅಂತಿಮ ಸಿದ್ಧತೆ ನಡೆದಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರೊಂದಿಗೆ ಹೊರ ಜಿಲ್ಲೆಯಿಂದಲೂ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ. ಪೊಲೀಸರೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿಗಳು ಉಸ್ತುವಾರಿ ವಹಿಸಲಿದ್ದಾರೆ. ಮಡಿಕೇರಿಯಲ್ಲಿ ಸುಮಾರು ೧೦೦೦ ಮಂದಿ, ಗೋಣಿಕೊಪ್ಪಲುವಿನಲ್ಲಿ ಸುಮಾರು ೩೦೦ ಮಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ವಾಹನ ಸಂಚಾರದ ಮಾರ್ಗ- ನಿಲುಗಡೆಯಲ್ಲೂ ಹಲವು ಬದಲಾವಣೆಗಳನ್ನು ಮಾಡಿ ಪೊಲೀಸ್ ಇಲಾಖೆ ಈಗಾಗಲೇ ಪ್ರಕಟಣೆಯನ್ನು ಹೊರಡಿಸಿದೆ. ವಿಜಯದಶಮಿಯ ಮುನ್ನಾದಿನವಾದ ಸೋಮವಾರಂದು ಜಿಲ್ಲಾದ್ಯಂತ ಆಯುಧಪೂಜೆಯ ಸಂಭ್ರಮ ಮನೆಮಾಡಿತ್ತು. ಆಯುಧ ಪೂಜೋತ್ಸವ ವಿಜಯದಶಮಿ ಆಚರಣೆಗೆ ಮತ್ತೊಂದು ಆಕರ್ಷಣೆಯಾಗಿ ಈ ಎರಡೂ ದಿನಗಳ ಕಾಲ ನಾಡಹಬ್ಬ ದಸರಾದಲ್ಲಿ ಜನರು ಬೆರೆಯುವುದು ಸಾಮಾನ್ಯವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ನಗರದಾದ್ಯಂತ ತಾತ್ಕಾಲಿಕ ಅಂಗಡಿ ಮಳಿಗೆಗಳು ತೆರೆಯಲ್ಪಟ್ಟಿದ್ದು ವ್ಯಾಪಾರ-ವಹಿವಾಟು ಜೋರಾಗಿದೆ.