ಶನಿವಾರಸಂತೆ, ಅ. ೨೦: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿದ್ದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಚಾಮುಂಡೇಶ್ವರಿ ಪ್ರತಿಮೆ ಮತ್ತು ಶಿವಲಿಂಗವನ್ನು ಧ್ವಂಸಗೊಳಿಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.
ಗುಡುಗಳಲೆ ಗ್ರಾಮದ ಹರ್ಷಿತ್, ಮಹೇಶ್ ಅವರು ಅದೇ ಜಾಗದಲ್ಲಿ ೨೫ ವರ್ಷಗಳ ಹಿಂದೆ ನೆಟ್ಟಿದ್ದ ಅರಳಿ ಮರವನ್ನು ಸಹ ಜೆಸಿಬಿ ಮುಖಾಂತರ ಬುಡ ಸಹಿತ ಉರುಳಿಸಿರುವುದಾಗಿ ಹುಲುಸೆ ಗ್ರಾಮಸ್ಥರು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ದೇವರ ವಿಗ್ರಹಗಳನ್ನು ನಾಶಗೊಳಿಸಿ, ಪವಿತ್ರವಾದ ಅರಳಿಮರವನ್ನು ಬುಡ ಸಹಿತ ಉರುಳಿಸಿ, ಭಾವನೆಗೆ ಅವಮಾನ ಮಾಡಿ, ವಿಕೃತಿ ಮೆರೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ವಸಂತ್, ಭರತ್, ಸೋಮಶೇಖರ್, ದಯಾ, ಗೋವಿಂದ್, ಎಚ್.ಎಲ್.ದೀಪು ಮತ್ತಿತರರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಘಟನೆ ಸ್ಥಳಕ್ಕೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಅರಣ್ಯ ರಕ್ಷಕ ಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿರುತ್ತಾರೆ. ಕಾನೂನು ಕ್ರಮ ಕೈಗೊಳ್ಳಲು ಪ್ರಕರಣವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಅರಣ್ಯಾಧಿಕಾರಿ ಗಾನಶ್ರೀ ತಿಳಿಸಿದ್ದಾರೆ.