ಮಡಿಕೇರಿ, ಅ. ೧೯: ಕವಿ ಹಾಗೂ ಕವಯತ್ರಿಗಳು ಕವನಗಳನ್ನು ರಚಿಸುವಾಗಿ ನವರಸಗಳಲ್ಲಿ ಒಂದನ್ನಾದರೂ ಅಳವಡಿಸಿಕೊಂಡು ಬರೆದರೆ ಉತ್ತಮ ಕವನಗಳಾಗುತ್ತವೆ. ಕರುಣಾ, ಭೀಭತ್ಸ, ಭಯಾನಕ, ವೀರ, ಹಾಸ್ಯ, ಶಾಂತ, ಶೃಂಗಾರ, ಅದ್ಭುತ, ರೌದ್ರ ಈ ನವರಸಗಳ ಪೈಕಿ ಸಂದರ್ಭಾನುಸಾರ ತಮ್ಮ ಕವನಗಳಲ್ಲಿ ಭಾವನೆಗಳನ್ನು ಅಳವಡಿಸಿಕೊಂಡರೆ ಉತ್ತಮ ಕವನಗಳು ರಚನೆಯಾಗುತ್ತವೆ ಎಂದು ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಸಲಹೆಯಿತ್ತರು.

ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಡೆದ ಬಹುಭಾಷಾ ಕವಿಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕವಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಅವರು ಮಾತನಾಡಿದರು.

ಮಾಧ್ಯಮಗಳಲ್ಲಿ ಪ್ರಕಟಗೊಳಿಸಲು ಅಥವಾ ಕವನ ಸಂಕಲನ ಹೊರತರುವ ಉದ್ದೇಶದಿಂದಷ್ಟೇ ಕುಳಿತು ಬರೆಯುವ ಕವನ ಪರಿಣಾಮಕಾರಿಯಾಗದು. ಅಂತ ಪ್ರೇರಣೆ ಉಂಟಾದಾಗ ತಕ್ಷಣವೆ ರಚಿಸುವ ಕವನಗಳು ಉತ್ತಮ ಕವನಗಳಾಗಿ ರೂಪುಗೊಳ್ಳುತ್ತವೆ ಎಂದು ರಾಜೇಂದ್ರ ಅವರು ನುಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ, ಸಾಹಿತಿ, ಸಂಶೋಧಕರಾದ ಡಾ. ಕೋರನ ಸರಸ್ವತಿ ಪ್ರಕಾಶ್ ಅವರು ಮಾತನಾಡಿ, ಕವಿ ಸೂಕ್ಷö್ಮಮತಿ ಯಾಗಿದ್ದು, ಈ ಲೋಕವನ್ನು ತನ್ನ ಅಂತರAಗದ ಕಣ್ಣಿನಿಂದ ನೋಡುತ್ತಾನೆ. ಕವನಗಳು ಸಕರಾತ್ಮಕ ಧೋರಣೆ ಯೊಂದಿಗೆ ಸಮಾಜದ ಸ್ವಾಸ್ಥö್ಯವನ್ನು ಕಾಪಾಡುವಂತಿರಬೇಕು. ಕವಿಯು ತಾನು ಗ್ರಹಿಸಿದ ಭಾವನೆಗಳನ್ನು ರಮ್ಯವಾಗಿ ಹೇಳಿದಾಗ ಅದು ಕವನ ಎನಿಸಿಕೊಳ್ಳುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಉಪಸ್ಥಿತರಿದ್ದರು. ಚೋಕಿರ ಅನಿತಾ ದೇವಯ್ಯ ನಿರೂಪಿಸಿ, ಅರುಣ್ ಕೂರ್ಗ್ ಸ್ವಾಗತಿಸಿ, ಕವಿಗೋಷ್ಠಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ವಂದಿಸಿದರು.