ಕೂಡಿಗೆ, ಅ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಮಹಾದೇವಿ ಸನ್ನಿಧಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮೃತ್ಯುಂಜಯ ಹೋಮ ಮತ್ತು ಚಂಡಿಕಾ ಹೋಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಇದರ ಅಂಗವಾಗಿ ಬೆಳಿಗ್ಗೆಯಿಂದಲೇ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಮೃತ್ಯುಂಜಯ ಹೋಮ, ಚಂಡಿಕಾಹೋಮ ಸೇರಿದಂತೆ ವಿವಿಧ ಬಗೆಯ ಪೂಜಾ ಕಾರ್ಯಕ್ರಮಗಳ ನಂತರ ಸಂಕಲ್ಪ ಹೋಮ ಸೇರಿದಂತೆ ಹಲವು ಪೂಜಾ ಕಾರ್ಯಗಳು ದೇವಾಲಯ ಆವರಣದಲ್ಲಿ ನಡೆದವು. ಪೂಜಾ ಕೈಂಕರ್ಯಗಳನ್ನು ಕೇರಳದ ಸಜಿ ಪಣಿಕ್ಕರ್, ಶ್ರೀನಿಧಿ, ಹರಿ ಅವರ ತಂಡದವರು ವಿಶೇಷ ಪೂಜೆಗಳೊಂದಿಗೆ ನೆರವೇರಿಸಿದರು. ನಂತರ ಮಹಾಮಂಗಳಾತಿ, ಪ್ರಸಾದ ವಿನಿಯೋಗ ನಡೆಯಿತು.

ಪೂಜಾ ಕಾರ್ಯಕ್ರಮದಲ್ಲಿ ಕುಶಾಲನಗರ, ಹಾರಂಗಿ ಕೂಡಿಗೆ, ಮದಲಾಪುರ ಹುದುಗೂರು, ಯಡವನಾಡು ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ದೇವಾಲಯ ಸಮಿತಿಯ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಎನ್.ಎಸ್. ಮುತ್ತಪ್ಪ, ಕಾರ್ಯದರ್ಶಿ ಬಿ.ಎಲ್. ಸುರೇಶ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.