ಸಾಮಾನ್ಯವಾಗಿ ವೈದ್ಯರಲ್ಲಿಗೆ ಜನ ತೆರಳಿದಾಗ ಆರೋಗ್ಯ ಸಂಬAಧಿತ ಸಲಹೆ ಕೊಡುತ್ತಾರೆ. ಮನಕ್ಕೆ ಸಮಾಧಾನ ತರುವಂತ ಸಂದೇಶ ನೀಡುತ್ತಾರೆ. ಆದರೆ ವೀರಾಜಪೇಟೆಯಲ್ಲಿರುವ ಈ ಹಿರಿಯ ವೈದ್ಯರು ಕಾಯಿಲೆ ಗುಣಪಡಿಸಲು ಮದ್ದು ಕೊಡುವುದರೊಂದಿಗೆ ಪ್ರತೀ ವರ್ಷ ಆಸಕ್ತರಿಗೆ ವನ್ಯಜೀವಿ ಗಳ ಮಹತ್ವದ ಸಂದೇಶ ನೀಡುತ್ತಾರೆ. ಈ ಮೂಲಕ ಜನರಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಕಾಳಜಿ ಮೂಡಿಸಲು ಮುಂದಾಗುತ್ತಾರೆ. ಇದನ್ನು ಇವರು ಒಂದೆರಡು ವರ್ಷಗಳಿಂದ ಮಾಡಿದ್ದಲ್ಲ. ಬರೋಬ್ಬರಿ ೩೯ ವರ್ಷಗಳಿಂದ ವನ್ಯಜೀವಿ ಸಂದೇಶವನ್ನು ವೀರಾಜಪೇಟೆ ಯಿಂದಲೇ ವಿಶ್ವವ್ಯಾಪಿ ವ್ಯಾಪಿಸುತ್ತಿರುವ ಅಪರೂಪದ ವೈದ್ಯರೇ ಡಾ. ಎಸ್. ವಿ. ನರಸಿಂಹನ್.
ಪ್ರತೀ ವರ್ಷ ಅಕ್ಟೋಬರ್ ಮೊದಲ ವಾರ ವನ್ಯಜೀವಿ ಸಂರಕ್ಷಣಾ ಸಪ್ತಾಹವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಈ ವಾರದಲ್ಲಿಯೇ ನರಸಿಂಹನ್ ಅವರು ಕೈಯಾರೆ ರಚಿಸಿರುವ ವನ್ಯಜೀವಿಗಳ ಸುಂದರ ಚಿತ್ರ ಮತ್ತು ಸಂದೇಶ ಹೊತ್ತ ಪತ್ರವೊಂದು ಆಸಕ್ತರನ್ನು ತಲುಪುತ್ತದೆ. ಅಂಚೆಯ ಮೂಲಕ ತಾವು ರಚಿಸಿದ ವನ್ಯಜೀವಿಗಳ ಭಾವಾನಾತ್ಯಕ ಚಿತ್ರಗಳನ್ನು ರವಾನಿಸುವ ಮೂಲಕ ಡಾ. ನರಸಿಂಹನ್ ವಿಭಿನ್ನ ರೀತಿಯಲ್ಲಿ ಸಂದೇಶ ಸಾರುತ್ತಾ ಬಂದಿದ್ದಾರೆ. ಈ ವರ್ಷ ಕೂಡ ನರಸಿಂಹನ್ ೨೨೭೦ ಕಾರ್ಡ್ಗಳಲ್ಲಿ ವನ್ಯಜೀವಿಗಳ ಚಿತ್ರ ರೂಪಿಸಿದ್ದಾರೆ. ೧೨೬೪ ಮಂದಿಗೆ ಅಂಚೆ ಮೂಲಕ ಈ ವಾರಪತ್ರಗಳು ರವಾನಿಸಲ್ಪಟ್ಟಿದೆ. ಕಳೆದ ೩೯ ವರ್ಷಗಳಲ್ಲಿ ನರಸಿಂಹನ್ ರಚಿಸಿದ ಇಂಥ ಚಿತ್ರಗಳ ಸಂಖ್ಯೆ ೮೦ ಸಾವಿರ. ಇಂಥ ಪತ್ರಗಳನ್ನು ಪಡೆದವರ ಸಂಖ್ಯೆಯೇ ೧೬ ಸಾವಿರ ಮೀರಿದೆ.
ಪ್ರತೀ ವರ್ಷವೂ ಡಾ. ನರಸಿಂಹನ್ ವನ್ಯಜೀವಿ ಸಂದೇಶವಾಹಕವಾಗಿ ವನ್ಯಜೀವಿಯೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವರ್ಷ ಕಾಮಳ್ಳಿ ಎಂಬ ಪಕ್ಷಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪಶ್ಛಿಮಘಟ್ಟ ಶ್ರೇಣಿಗಳಲ್ಲಿ ಕಂಡುಬರುವ ಕಾಮಳ್ಳಿ ಪಕ್ಷಿಯು ವೃಕ್ಷವಾಸಿ. ಮಿನುಗುವ ಕಪ್ಪು ದೇಹಕ್ಕೆ ರೆಕ್ಕೆಯ ಮೇಲೆ ಬಿಳಿಮಚ್ಚೆಯನ್ನು ಕಾಮಳ್ಳಿ ಹೊಂದಿದೆ. ಮರದ ತುತ್ತ ತುದಿಯಲ್ಲಿ ಕುಳಿತು ತೀಕ್ಷ÷್ಣ ಧ್ವನಿಯಲ್ಲಿ ಸಿಳ್ಳೆ ಹಾಕುವ ಕಾಮಳ್ಳಿಯ ಸಿಳ್ಳಿನ ಧ್ವನಿ ೪-೫ ಕಿ.ಮೀ.ಯವರೆಗೂ ಕೇಳುತ್ತದೆ. ಬೇರೆ ಪಕ್ಷಿಗಳ ಧ್ವನಿಯ ಜತೆಗೇ ಮನುಷ್ಯರ ಧ್ವನಿಯನ್ನೂ ಅತ್ಯಂತ ಸಮರ್ಪಕವಾಗಿ ಕಾಮಳ್ಳಿ ಅನುಕರಿಸುವುದು ಇದರ ವಿಶೇಷ ಗುಣ. ಇಂಥ ವಿಶಿಷ್ಟ ಪಕ್ಷಿಯನ್ನು ಈ ವರ್ಷದ ವನ್ಯಜೀವಿ ಸಂದೇಶವಾಹಕನಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಡಾ. ನರಸಿಂಹನ್ ಹೇಳಿದರು. ರೋಟರಿ ಸಂಸ್ಥೆ ಯಲ್ಲಿನ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ನರಸಿಂಹನ್ ಈ ಮೂಲಕ ಸಾಮಾಜಿಕ ಸೇವೆಯ ಕಾರ್ಯಕ್ಕೂ ಸೈ ಎನಿಸಿಕೊಂಡಿದ್ದಾರೆ.
ವಿಶ್ವದ ಪ್ರತೀಯೊಂದು ವಸ್ತುವಿಗೂ ಅದರದ್ದೇ ಆದ ವಿಶಿಷ್ಟ ಗುಣ ಇದೆ. ಅದರದ್ದೇ ಆದ ನಿಯಮಗಳಿದೆ. ಈ ನಿಯಮಗಳಿಗೆ ಅನುಗುಣವಾಗಿಯೇ ಸಕಲ ವಸ್ತುಗಳು ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿವೆ. ಒಂದು ಜೀವಿ ಮತ್ತೊಂದು ಜೀವಿಗೆ ಆಧಾರ, ಒಂದು ಜೀವಿ ಮತ್ತೊಂದು ಜೀವಿಯ ಆಹಾರ. ಇದು ಪ್ರಾಕೃತ್ತಿಕ ನಿಯಮ. ವೈರುದ್ಯ, ವೈರತ್ವಗಳ ನಡುವೇ ಎಲ್ಲಾ ಜೀವಿಗಳು ಈ ಪೃಥ್ವಿಯ ಮೇಲೆ ಒಗ್ಗಟ್ಟಿನಿಂದ ಜೀವಿಸುತ್ತಿವೆ. ಸಹಬಾಳ್ವೆ ಸಾಮರಸ್ಯ, ಸಹಭಾಗಿತ್ಯ ಗುಣವೇ ಇದಕ್ಕೆಲ್ಲಾ ಕಾರಣ. ಇವೆಲ್ಲಾ ಪ್ರಕೃತ್ತಿಯು ನಿಶ್ಯಬ್ದವಾಗಿ ನಮಗೆ ಕಲಿಸಿದ ಅಪೂರ್ವ ಪಾಠ. ಇಂಥ ಕಾರ್ಯಕ್ಕೆ ಅಡ್ಡಗಾಲು ಹಾಕುವ, ಇಲ್ಲಿ ನಡೆಯುವ ಬಾಳಿನ ಆಟವನ್ನು ಏರುಪೇರು ಮಾಡುವ ವಿಕೃತ ಜೀವಿಯೇ ಮಾನವನಾಗಿದ್ದಾನೆ. ಇಂಥ ಮನಸ್ಥಿತಿ ಭವಿಷ್ಯದಲ್ಲಿ ತನ್ನ ಜೀವಕ್ಕೇ ಮಾರಕ ಎಂಬುದರ ಸಷ್ಟ ಅರಿವಿದ್ದರೂ, ಆಗಿಂದಾಗ್ಗೆ ಪ್ರಕೃತ್ತಿಯು ನೀಡುತ್ತಿರುವ ಎಚ್ಚರಿಕೆಯ ಗಂಟೆಯನ್ನೂ ನಿರ್ಲಕ್ಷಿಸುತ್ತಾ ಮುಂದೆ ಸಾಗುತ್ತಿರುವ ಮನುಕುಲಕ್ಕೆ ಎಚ್ಚರಿಕೆಯನ್ನು ಕಾಲದಿಂದ ಕಾಲಕ್ಕೆ ನೀಡಲೇಬೇಕಾಗಿದೆ.
ಈ ನಿಟ್ಟಿನಲ್ಲಿಯೇ ತಾನು ತನ್ನ ಕೈಲಾದ ಕಾರ್ಯವಾಗಿ ಪ್ರತೀವರ್ಷ ವನ್ಯಜೀವಿ ಸಂದೇಶವುಳ್ಳ ಪರಿಸರ ಕಾಳಜಿಯ ಅಂಚೆ ಕಾರ್ಡ್ಗಳನ್ನು ಆಸಕ್ತರಿಗೆ ರವಾನಿಸುತ್ತಿರುವುದಾಗಿ ಡಾ.ನರಸಿಂಹನ್ ಹೇಳುತ್ತಾರೆ. ವರ್ಷದಲ್ಲಿ ಸಮಯ ಸಿಕ್ಕಾಗಲೆಲ್ಲಾ ವೀರಾಜಪೇಟೆಯಲ್ಲಿನ ತನ್ನ ಮನೆಯ ಕೋಣೆಯಲ್ಲಿ ಕುಳಿತು ವನ್ಯಜೀವಿಗಳ ಚಿತ್ರಗಳನ್ನು ಬಿಡಿಸುತ್ತಾ ಅಕ್ಟೋಬರ್ ಬಂದೊಡನೆ ಆ ಚಿತ್ರಗಳನ್ನು ವ್ಯವಸ್ಥಿತವಾಗಿ ಅಂಚೆ ಮೂಲಕ ನರಸಿಂಹನ್ ಕಳುಹಿಸುತ್ತಾರೆ.
ಇದು ನರಸಿಂಹನ್ ಪಾಲಿಗೆ ಪ್ರತೀ ವರ್ಷದ ಕಾಯಕವಾಗಿದೆ. ವರ್ಷದಲ್ಲಿ ಮಳೆ ತಪ್ಪಬಹುದು, ಗಾಳಿಯಲ್ಲಿ ಏರಿಳಿತವಾಗಬಹುದು, ಆದರೆ ನರಸಿಂಹನ್ ಕಾಳಜಿಯ ಚಿತ್ರಗಳಲ್ಲಿ ಮಾತ್ರ ಲವಲೇಶವೂ ಹೆಚ್ಚು ಕಮ್ಮಿಯಾಗುವುದಿಲ್ಲ. ಶಿಸ್ತುಬದ್ದ ಕೈಂಕರ್ಯಕ್ಕೆ ಮಾದರಿಯಾಗಿ ಡಾ.ನರಸಿಂಹನ್ ಕಂಡುಬರುತ್ತಾರೆ. ಡಾ.ನರಸಿಂಹನ್ ಅವರ ಈ ಕಾರ್ಯಕ್ಕೆ ಲಿಮ್ಕಾ ಬುಕ್ ಆಫ್ ವಲ್ಡ್ ರೆಕಾರ್ಡ್ ಅತ್ಯಧಿಕ ಸಂಖ್ಯೆಯಲ್ಲಿ ವನ್ಯಜೀವಿಗಳ ಚಿತ್ರಗಳ ಕಾರ್ಡ್ ರಚಿಸುವ ಕಲಾವಿದ ಎಂಬ ಪ್ರತಿಷ್ಟಿತ ದಾಖಲೆ ಪತ್ರ ನೀಡಿದೆ. ವೀರಾಜಪೇಟೆಯಲ್ಲಿ ೪ ದಶಕಗಳ ಹಿಂದೆ ತರಂಗ ಎಂಬ ಸಾಂಸ್ಕೃತಿಕ ಸಂಘ ಇತ್ತು. ಈ ಸಮಾನ ಮನಸ್ಕರ ಸಂಘದ ಕಾರ್ಯಕ್ರಮ ವೊಂದರ ಆಹ್ವಾನಪತ್ರಿಕೆಗೆ ಜಿಂಕೆಯ ಚಿತ್ರ ಬಿಡಿಸಿದ್ದೆ. ಇದು ಸಂಘದ ಸದಸ್ಯರಿಂದ ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು. ಇದೇ ಉಮೇದಿನಲ್ಲಿ ವನ್ಯಜೀವಿಗಳ ಚಿತ್ರ ರೂಪಿಸತೊಡಗಿದೆ. ಆರಂಭಿಕ ವರ್ಷ ಜಿಂಕೆ ಚಿತ್ರವಿರುವ ೧೫೦ ಚಿತ್ರಗಳನ್ನು ರಚಿಸಿದ್ದೆ ಎಂದು ನರಸಿಂಹನ್ ಸ್ಮರಿಸಿಕೊಂಡರು. ಚಿತ್ರ ವೊಂದನ್ನು ಅಪೂರ್ವವಾಗಿ ರೂಪಿಸಲು ಶೃದ್ದೆ, ತದೇಕಚಿತ್ತತೆ ಬೇಕು. ಇಂಥ ಗುಣವನ್ನು ಹೊಂದಿರುವ ಡಾ. ನರಸಿಂಹನ್ ೩೯ ವರ್ಷಗಳಿಂದಲೂ ತನ್ನ ಹವ್ಯಾಸವನ್ನು ಏಕಾಗ್ರತೆಯಿಂದ ಮುಂದುವರೆಸಿ ಕೊಂಡು ಬಂದಿರುವುದು ಶ್ಲಾಘನೀಯ. ಕೊಡಗಿನ ಹೆಮ್ಮೆಯ ಕಲಾಸಾಧಕ ಇವರು.
-ಅನಿಲ್ ಎಚ್. ಟಿ., ಮಡಿಕೇರಿ.
ಮೊ. ೯೮೪೪೦೬೦೧೭೪