ಕಣಿವೆ, ಅ. ೧೯: ಕುಶಾಲನಗರದ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ ತ್ಯಾಜ್ಯವನ್ನು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಬಳಿ ಸಂಗ್ರಹಿಸಲಾಗುತ್ತಿದೆ. ಅಂದರೆ ಪುರಸಭೆಯ ಆಡಳಿತ ವೈಜ್ಞಾನಿಕ ರೀತಿಯಲ್ಲಿ ಕಸದ ವಿಲೇವಾರಿಯನ್ನು ನಿರ್ವಹಿಸದ ಕಾರಣ ಕಸ ಸಂಗ್ರಹಣಾ ವ್ಯಾಪ್ತಿಯ ಸ್ಥಳೀಯರು ಸಮಸ್ಯೆಯಲ್ಲಿ ದಿನಗಳೆಯುವಂತಾಗಿದೆ.
ಗುಯ್ ಗುಡುತ್ತಾ ಮುತ್ತಿಕ್ಕುವ ನೊಣ - ಸೊಳ್ಳೆಗಳ ರಾಶಿ
ನಿತ್ಯವೂ ಸಂಗ್ರಹವಾಗುವ ಲಾರಿಗಟ್ಟಲೇ ತ್ಯಾಜ್ಯದ ರಾಶಿ ಮಳೆಯ ನೀರಿಗೆ ಕೊಳೆತು ಗಬ್ಬೆದ್ದು ನಾರುತ್ತಿರುವುದು ಒಂದೆಡೆಯಾದರೆ, ದುರ್ನಾತದಿಂದಾಗಿ ನೊಣ ಹಾಗೂ ಸೊಳ್ಳೆಗಳ ರಾಶಿ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿವೆ.
ಅಂದರೆ ಹರಡಿರುವ ಕಸದ ರಾಶಿಯ ಅರ್ಧ ಕಿಲೋ ಮೀಟರ್ಗೂ ಹೆಚ್ಚಿನ ಸುತ್ತಳತೆಯಲ್ಲಿ ಇರುವ ಮನೆಗಳ ನಿವಾಸಿಗಳು ಸೊಳ್ಳೆ ಹಾಗೂ ನೊಣಗಳ ಕಿರಿ ಕಿರಿಯಿಂದ ಹೈರಾಣಾಗಿದ್ದಾರೆ.
ಕುಳಿತಲ್ಲಿ ಕೂರುವಂತಿಲ್ಲ... ನಿಂತಲ್ಲಿ ನಿಲ್ಲುವಂತಿಲ್ಲ...
ನೆಮ್ಮದಿಲಿ ಮಲಗುವಂತಿಲ್ಲ. ಏನಾದರೂ ಕುಡಿವಾಗ ಅಥವಾ ತಿನ್ನುವಾಗ ನೊಣಗಳ ಹಾರಾಟ, ಸೊಳ್ಳೆಗಳ ಛೀರಾಟ ಜನರ ನೆಮ್ಮದಿಗೆ ಭಂಗ ತಂದಿದೆ. ಬಲಗೈಯಲ್ಲಿ ಊಟ ಮಾಡಿದರೆ ಎಡಗೈಯಲ್ಲಿ ನೊಣಗಳನ್ನು ಓಡಿಸಬೇಕು. ಹೀಗಾಗಿ ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರ ಸ್ಥಿತಿ ಹೇಳತೀರದಾಗಿದೆ.
ಶ್ವಾನಗಳ ರಂಪಾಟ
ಕಸದ ರಾಶಿಯನ್ನೇ ನಿತ್ಯದ ಆವಾಸ ತಾಣ ಮಾಡಿಕೊಂಡಿರುವ ಬೀದಿ ಶ್ವಾನಗಳು ಇಲ್ಲಿ ಮಿತಿ ಮೀರಿದ್ದು ಹಗಲು ರಾತ್ರಿ ಒಂದಕ್ಕೊAದು ಜಗಳ ವಾಡಿಕೊಂಡು ಕೂಗಾಡುವ ಪರಿ ಸ್ಥಳೀಯರ ನೆಮ್ಮದಿಯನ್ನು ಕಸಿದಿದೆ.
ಕಸದ ಪ್ಲಾಸ್ಟಿಕ್ಗಳನ್ನು ಕಚ್ಚಿಕೊಂಡು ಗ್ರಾಮದ ಬೀದಿ ಬೀದಿಗಳಲ್ಲಿ ಓಡಾಡುವ ಶ್ವಾನಗಳಿಂದಾಗಿ ರೈತರ ಕೃಷಿ ಭೂಮಿ ಪ್ಲಾಸ್ಟಿಕ್ ಮಯವಾಗಿದೆ.
ಗಾಳಿಯಲ್ಲೂ ತೂರಿ ಬರುವ ಪ್ಲಾಸ್ಟಿಕ್ಗಳು ರೈತರ ಜಮೀನಿಗೆ ಹರಡಿ ಪರಿಸರವನ್ನು ಕಲುಷಿತಗೊಳಿಸಿವೆ. ಹೀಗಾಗಿ ಭೂಮಿಯನ್ನು ಉಳುಮೆ ಮಾಡುವಾಗ ಪ್ಲಾಸ್ಟಿಕ್ಗಳು ಚೀಲಗಟ್ಟಲೇ ಸಿಗುತ್ತಿವೆ ಎನ್ನುತ್ತಾರೆ ಸ್ಥಳೀಯ ಕೃಷಿಕರಾದ ಗಂಗಯ್ಯ, ಸುರೇಶ, ಶಿವರಾಮ ಮೊದಲಾದವರು.
ಸಾಂಕ್ರಾಮಿಕ ರೋಗ ಭೀತಿ
ಹತ್ತು ಕಿ.ಮೀ. ದೂರದ ಕುಶಾಲನಗರದ ತ್ಯಾಜ್ಯಗಳನ್ನು ನಮ್ಮೂರಲ್ಲಿ ಹಾಕಲು ಜಾಗ ಕೊಟ್ಟು ಮಹಾ ಪಾಪ ಮಾಡಿಕೊಂಡು ಬಿಟ್ಟೊ. ಕಸದ ರಾಶಿಗೆ ಒಳಗಾಗದ ಸಂದರ್ಭ ನಮ್ಮೂರ ಪರಿಸರ ಅದೆಷ್ಟು ಸುಂದರವಾಗಿತ್ತು.
ನಮ್ಮೂರ ಜನ, ನಮ್ಮೂರ ಕೃಷಿ ಭೂಮಿ ಅದೆಷ್ಟು ಚೆಂದ ಇತ್ತು. ಆದರೆ, ಇಂದು ಕಸದ ಬೀಡಾಗಿದೆ. ರಸ್ತೆಯಲ್ಲಿ ಸಾಗುವ ಪ್ರತಿಯೊಬ್ಬರು ಮೂಗು ಮುಚ್ಚಿಯೇ ತಿರುಗಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ಗಾಳಿ ಬೀಸಿದಾಗಂತೂ ಕೊಳೆತ ಕಸದ ರಾಶಿಯಲ್ಲಿನ ದುರ್ನಾತ ಕಿಲೋ ಮೀಟರ್ವರೆಗೂ ಇಡೀ ಪರಿಸರವನ್ನು ಹಾಳುಮಾಡಿದೆ. ಸುತ್ತಲಿನ ಕಣಿವೆ, ಭುವನಗಿರಿ, ಸೀಗೆಹೊಸೂರು, ಹಕ್ಕೆ ಹಾಗೂ ಹುಲುಸೆ ಗ್ರಾಮಗಳತನಕವೂ ಕಸದ ತ್ಯಾಜ್ಯದ ವಾಸನೆ ಹರಡಿ ಸಾಂಕ್ರಾಮಿಕ ರೋಗ ಭೀತಿ ಉಂಟು ಮಾಡಿದೆ. ಕುಶಾಲನಗರ ಪುರಸಭೆಯವರು ಕಸವನ್ನು ಸರಿಯಾಗಿ ನಿರ್ವಹಿಸಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.
ಕಳೆದ ಹತ್ತು ವರ್ಷಗಳಿಂದಲೂ ಕಸ ಸಂಗ್ರಹ ಸ್ಥಳದಲ್ಲಿ ಯಂತ್ರಾಗಾರಗಳನ್ನು ಅಳವಡಿಸಿ ವೈಜ್ಞಾನಿಕ ಮಾದರಿಯಲ್ಲಿ ಕಸದ ವಿಂಗಡಣೆ ಮಾಡುತ್ತೇವೆ. ಕಸ ತ್ಯಾಜ್ಯದಿಂದ ರಸವನ್ನು ತೆಗೆದು ರೈತರಿಗೆ ಕೃಷಿ ಭೂಮಿಗೆ ಅನುವಾಗುವ ಗೊಬ್ಬರವನ್ನು ಉತ್ಪತ್ತಿ ಮಾಡಿಕೊಡಲಾಗುತ್ತದೆ ಎಂದು ಸಬೂಬು ಹೇಳಿಕೊಂಡು ದಶಕಗಳನ್ನು ಕಳೆದಾಯಿತು. ಇನ್ನು ನಮಗೆ ಸಹಿಸಲು ಆಗಲ್ಲ ಎಂದು ಗ್ರಾಮದ ಸತೀಶ, ಭಾಗ್ಯ, ಧರ್ಮ, ಕೃಷ್ಣ, ಸಣ್ಣಸ್ವಾಮಿ ಮೊದಲಾದವರು ಹೇಳುತ್ತಾರೆ.
ಕೋಟಿಗಟ್ಟಲೆ ಹಣ ನಿಷ್ಪçಯೋಜಕ
ಭುವನಗಿರಿಯ ಸುಮಾರು ಏಳು ಎಕರೆಯಷ್ಟು ವ್ಯಾಪ್ತಿಯಲ್ಲಿನ ಕಸ ತ್ಯಾಜ್ಯ ಸಂಗ್ರಹಣಾ ಸ್ಥಳದಲ್ಲಿ ಪುರಸಭೆಯವರು ಅಂದಿನಿAದ ಇಂದಿನವರೆಗೂ ವಿವಿಧ ಕಾಮಗಾರಿ ಗಳಿಗಾಗಿ ಎರಡರಿಂದ ಮೂರು ಕೋಟಿ ರೂಗಳನ್ನು ವಿನಿಯೋಗಿಸಿ ದ್ದಾರೆ. ಆದರೆ ಎಲ್ಲವೂ ನಿರರ್ಥಕ ಹಾಗೂ ನಿಷ್ಪçಯೋಜಕವಾದಂತಾಗಿದೆ.
ಇದೇ ಕಸ ವಿಲೇವಾರಿ ಘಟಕದ ಬಳಿ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಶೌಚಾಲಯ ಬಳಕೆಗೂ ಮುನ್ನವೇ ಕಾಡು ಸಸ್ಯಗಳಿಂದ ಆವೃತವಾಗಿವೆ. ಇನ್ನು ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ತೆರೆದ ಗೋದಾಮು ಹಾಗೂ ಡಾಂಬರು ಕಾಮಗಾರಿ ಉಪಯೋಗಕ್ಕೂ ಮೊದಲೇ ಕಳಪೆ ಗುಣಮಟ್ಟದ ಬಗ್ಗೆ ಸಾರಿ ಹೇಳುತ್ತಿವೆ. ಅಂದರೆ ಒಂದೇ ಮಳೆಗೆ ಡಾಂಬರು ರಸ್ತೆ ಕಿತ್ತು ಹೋಗಿದೆ. ಇನ್ನು ಅವೈಜ್ಞಾನಿಕ ನಿರ್ಮಾಣದ ಫಲ ತೆರೆದ ಗೋದಾಮು ಕಾಮಗಾರಿಯ ಒಳಾವರಣ ಈಜುಕೊಳದಂತಾಗಿದೆ.
ರಕ್ಷಣೆಗೆ ಸ್ಥಳೀಯ ಗ್ರಾ.ಪಂ.ಗೆ ಸ್ಥಳೀಯರ ಆಗ್ರಹ
ಇಲ್ಲಿನ ಕಸ ಸಂಗ್ರಹಣೆಯ ಅಸಮರ್ಪಕ ನಿರ್ವಹಣೆಯಿಂದ ನಿತ್ಯವೂ ಒಂದಿಲ್ಲ ಒಂದು ಸಮಸ್ಯೆಯಲ್ಲಿ ಮುಳುಗೇಳುತ್ತಿರುವ ಇಲ್ಲಿನ ಮಂದಿ ಸೂಕ್ತ ರಕ್ಷಣೆಗಾಗಿ ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತವನ್ನು ಕೋರಿದ್ದು, ಒಂದೋ ನಮ್ಮನ್ನು ಕಸದ ಸಮಸ್ಯೆಯಿಂದ ಮುಕ್ತಗೊಳಿಸಿ. ಇಲ್ಲವೇ ಒಕ್ಕಲೆಬ್ಬಿಸಿ. ನಮ್ಮನ್ನು ಬದುಕಲು ಬಿಡಿ ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ ಪುರಸಭೆಯವರು ಸೃಷ್ಟಿಸಿರುವ ಕಸ ತ್ಯಾಜ್ಯ ಸಮಸ್ಯೆ ಗಳಿಂದ ನಾವು ಅನುಭವಿಸುತ್ತಿರುವ ನರಕ ಸದೃಶ ಜೀವನವನ್ನು ಖುದ್ದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ನ್ಯಾಯ ಸಲ್ಲಿಸಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
- ಕೆ.ಎಸ್. ಮೂರ್ತಿ