ಮುಳ್ಳೂರು, ಅ. ೧೯: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ಯ ವಿಶೇಷ ಗ್ರಾಮ ಸಭೆ ಗ್ರಾ.ಪಂ. ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮಹಮದ್ ಹನೀಫ್ ಅಧ್ಯಕ್ಷತೆಯಲ್ಲಿ ನಡೆಯಿತು.

ನಿವೇಶನ ರಹಿತ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆಯುವ ಸಲುವಾಗಿ ನಡೆದ ವಿಶೇಷ ಸಭೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿ ಸದರಿ ಗ್ರಾ.ಪಂ.ಗೆ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡುವ ಸಲುವಾಗಿ ಸರಕಾರದ ವತಿಯಿಂದ ೬ ಎಕರೆ ಜಾಗವನ್ನು ಮೀಸಲು ಮಾಡಲಾಗಿದ್ದು ಈ ಸಂಬAಧ ಜಾಗವನ್ನು ಗ್ರಾ.ಪಂ. ಹದ್ದುಬಸ್ತು ಮಾಡಿಕೊಂಡಿದೆಯೊ? ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಶ್ನಿಸಿದರು. ಈ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಭೆಯ ನೋಡೆಲ್ ಅಧಿಕಾರಿ ರಾಕೇಶ್ ಮತ್ತು ಭಾನುಪ್ರಕಾಶ್ ಗ್ರಾ.ಪಂ.ಗೆ ಸರಕಾರದಿಂದ ೪ ಎಕರೆ ಜಾಗ ಮಂಜೂರಾತಿಯಾಗಿದೆ. ಇದರಲ್ಲಿ ೨ ಎಕರೆ ಜಾಗವನ್ನು ಹದ್ದುಬಸ್ತು ಮಾಡಲಾಗಿದೆ. ಉಳಿದ ೨ ಎಕರೆ ಜಾಗವನ್ನು ಹದ್ದುಬಸ್ತು ಮಾಡುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದರು. ಈ ವಿಷಯಕ್ಕೆ ಮುಂದುವರೆದ ಚರ್ಚೆಯಲ್ಲಿ ಗ್ರಾಮಸ್ಥರು ಈ ಹಿಂದೆ ನಿವೇಶನಕ್ಕಾಗಿ ಅರ್ಜಿ ಕೊಟ್ಟಿರುವ ಕೆಲವು ಫಲಾನುಭವಿಗಳು ಮತ್ತೆ ನಿವೇಶನ ಕೋರಿ ಅರ್ಜಿ ನೀಡಿದ್ದಾರೆ. ಅಂತಹ ಫಲಾನುಭವಿಗಳ ಅರ್ಜಿಯನ್ನು ಗಮನಿಸಿ ಗ್ರಾ.ಪಂ.ಯು ತಿರಸ್ಕರಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು. ಗ್ರಾ.ಪಂ.ಗೆ ಸರಕಾರ ೬ ಎಕರೆ ಜಾಗ ಮಂಜೂರಾತಿ ಮಾಡಿಕೊಟ್ಟಿದ್ದರೆ ಗ್ರಾ.ಪಂ. ವ್ಯಾಪ್ತಿಯ ೧೫೦ ಮಂದಿಯಷ್ಟು ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಬಹುದಾಗಿತ್ತು ಎಂದು ಗ್ರಾಮಸ್ಥರು ಅಸಮಾಧಾನ ತೋರಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ೨೦-೩೦ ವರ್ಷಗಳಿಂದ ಊರೂಡುವೆ ಹಾಗೂ ಗೋಮಾಳ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡಿದ್ದಾರೆ. ಅಂತಹವರಿಗೆ ಸರಕಾರ ಹಕ್ಕುಪತ್ರ ನೀಡುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂತು.

ಸಭೆಯಲ್ಲಿ ೧೨೦ ಕ್ಕಿಂತ ಹೆಚ್ಚಿನ ನಿವೇಶನ ರಹಿತ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಎಂ.ಎA. ಹನೀಫ್ ಮಾತನಾಡಿದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಮೋಕ್ಷಿತ್, ಬಿ.ಡಿ. ದಿನೇಶ್, ರೇಣುಕಾ ಮೇದಪ್ಪ, ವಿನೋದ್ ಆನಂದ್, ಪವನ್ ಗಗನ್, ದೊಡ್ಡಯ್ಯ ಜಿ.ಪಂ. ಇಂಜಿನಿಯರ್ ಸಲೀಂ, ಗ್ರಾಮ ಅಭಿವೃದ್ಧಿ ಅಧಿಕಾರಿ ಚೈತ್ರ, ಗ್ರಾ.ಪಂ. ಕಾರ್ಯದರ್ಶಿ ಅಶ್ವಥ್ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.