ಮಡಿಕೇರಿ, ಅ. ೧೯: ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕೊಡವ ಕುಟುಂಬಗಳ ನಡುವೆ ಆಯೋಜಕ ಕುಟುಂಬಗಳ ಸಹಕಾರದೊಂದಿಗೆ ಕಳೆದ ೨೩ ವರ್ಷಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಕೊಡವ ಕ್ರಿಕೆಟ್ ಅಕಾಡೆಮಿ ಇದೀಗ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.

ಕ್ರಿಕೆಟ್ ಅಕಾಡೆಮಿಯ ಮೂಲಕ ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿರುವ ಕೊಡವ ಸಮಾಜಗಳ ನಡುವೆ ಅಂತರ ಕೊಡವ ಸಮಾಜ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಯೋಜಿಸಲಾಗುತ್ತಿದೆ. ನವೆಂಬರ್ ೧೧ ರಿಂದ ೧೪ರವರೆಗೆ ವೀರಾಜಪೇಟೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಚೊಚ್ಚಲ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು. ಅಕಾಡೆಮಿಯ ಖಜಾಂಚಿ ಕೊಕ್ಕೆಂಗಡ ರಂಜನ್ ಮಾತನಾಡಿ, ಈ ಪಂದ್ಯಾವಳಿಯನ್ನು ಪ್ರಸ್ತುತ ಕೇವಲ ಕೊಡಗಿನಲ್ಲಿರುವ ಕೊಡವ ಸಮಾಜಗಳ ನಡುವೆ ಮಾತ್ರ ನಡೆಸಲಾಗುತ್ತಿದೆ. ಕೊಡಗಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ಹೆಚ್ಚಾಗಿ ನಡೆಯದ ಕಾರಣ ಬಹಳಷ್ಟು ಪ್ರತಿಭಾನ್ವಿತ ಲೆದರ್‌ಬಾಲ್ ಕ್ರಿಕೆಟ್ ಆಟಗಾರರು ಅವಕಾಶವಂಚಿತರಾಗಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇಂತಹವರಿಗೆ ಪ್ರೋತ್ಸಾಹ ನೀಡಿ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಅಕಾಡೆಮಿ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದರು. ಪ್ರಸ್ತುತದ ಸನ್ನಿವೇಶದಲ್ಲಿ ಸೂಕ್ತ ಅವಕಾಶಗಳು ಇಲ್ಲದಿದ್ದರೂ ಸಹ ಕೊಡವ ಜನಾಂಗದ ಎಂಟತ್ತು ಆಟಗಾರರು ರಾಜ್ಯ ಕ್ರಿಕೆಟ್ ತಂಡ ಸೇರಿದಂತೆ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ ಎಂಬುದು ಗಮನಾರ್ಹವಾಗಿದೆ.

ಕೆಲವಾರು ಯುವ ಆಟಗಾರರು ಪ್ರತಿಭೆ ಇದ್ದರೂ ರಾಜ್ಯ ಹಾಗೂ ಇತರ ತಂಡಗಳಲ್ಲಿ ಅವಕಾಶ ಪಡೆಯುವಲ್ಲಿ ವಂಚಿತರಾಗುತ್ತಿರುವುದನ್ನು ಮನಗಂಡು ಅಕಾಡೆಮಿ ಈ ವರ್ಷದಿಂದ ಕೊಡಗಿನಲ್ಲಿರುವ ಅಂತರ ಕೊಡವ ಸಮಾಜಗಳ ನಡುವೆ ಪಂದ್ಯಾವಳಿ ನಡೆಸಲು ಮುಂದಾಗಿದೆ. ಒಟ್ಟು ೧೨ ತಂಡಗಳ ನಿರೀಕ್ಷೆಯಿದ್ದು ೮ ತಂಡಗಳು ಖಚಿತವಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ಅಕ್ಟೋಬರ್ ೩೦ ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ಜನಾಂಗದ ಆಟಗಾರರು ಕೊಡಗು ಜಿಲ್ಲೆಯವರಾಗಿದ್ದು, ಇಲ್ಲಿನ ಆಧಾರ್‌ಕಾರ್ಡ್ ಹೊಂದಿರಬೇಕು. ಏಕೆಂದರೆ ಇತರೆಡೆಗಳಲ್ಲಿ ನೆಲೆಸಿರುವವರಿಗೆ ಕೆಲವಾರು ಅವಕಾಶಗಳು ಸಿಗುತ್ತಿವೆ. ಆದರೆ ಜಿಲ್ಲೆಯವರಿಗೆ ಪ್ರೋತ್ಸಾಹ ನೀಡುವುದು ಉದ್ದೇಶವಾಗಿದೆ ಎಂದರು.

ಇದು ಒಟ್ಟು ೨೦ ಓವರ್‌ಗಳ ಪಂದ್ಯಾಟವಾಗಿದ್ದು, ಐಸಿಸಿಯ ನಿಯಮಾವಳಿಗಳನ್ನೇ ಪಾಲಿಸಲಾಗುತ್ತದೆ. ಕೊಡವ ಸಮಾಜಗಳು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕೊಡವ ಕ್ರಿಕೆಟ್ ಅಕಾಡೆಮಿಯನ್ನು ಕೀತಿಯಂಡ ಕಾರ್ಶನ್ ಕಾರ್ಯಪ್ಪ ಅವರು ಮುನ್ನಡೆಸುತ್ತಿದ್ದು, ಉಪಾಧ್ಯಕ್ಷರಾಗಿ ಚೇರಂಡ ಕಿಶನ್, ಕಾರ್ಯದರ್ಶಿಯಾಗಿ ಕುಂಡ್ರAಡ ಬೋಪಣ್ಣ, ಖಜಾಂಚಿಯಾಗಿ ಕೊಕ್ಕೆಂಗಡ ರಂಜನ್, ನಿರ್ದೇಶಕರುಗಳಾಗಿ ಪಟ್ಟಡ ಪ್ರಕಾಶ್, ಬಾಳೆಯಡ ಪ್ರತೀಷ್, ಕೀತಿಯಂಡ ವಿವೇಕ್, ತಾತಂಡ ಪ್ರತಾಪ್, ಚೌರಿರ ಶರತ್, ಮಾಚಂಗಡ ಸೋಮಣ್ಣ, ಚೆಕ್ಕೆರ ಚಂದ್ರಪ್ರಕಾಶ್ ಮತ್ತು ಕೊಟ್ಟಂಗಡ ಸೂರಜ್ ಸಹಕಾರ ನೀಡುತ್ತಿದ್ದಾರೆ. ಇದೀಗ ಹೊಸ ಪ್ರಯತ್ನವಾಗಿ ಲೆದರ್‌ಬಾಲ್ ಪಂದ್ಯಾವಳಿಯ ಚಿಂತನೆ ನಡೆಸಲಾಗಿದೆ. ವಿಜೇತರಿಗೆ ಸೂಕ್ತ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ವರ್ಷದ ಯಶಸ್ಸಿನ ಆಧಾರದಲ್ಲಿ ಮುಂದಿನ ವರ್ಷದಿಂದಲೂ ಈ ಬಗ್ಗೆ ಪ್ರಯತ್ನ ಮುಂದುವರಿಸಲಾಗುವುದು ಎಂದು ಪ್ರಮುಖರು ತಿಳಿಸಿದರು. ಹೆಚ್ಚಿನ ಮಾಹಿತಿಗೆ ೯೬೩೨೦೮೫೫೩೬, ೯೩೪೩೮೫೬೮೭೭ ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಕುಂಡ್ರAಡ ಬೋಪಣ್ಣ, ಪಟ್ಟಡ ಪ್ರಕಾಶ್, ಮಾಚಂಗಡ ಸೋಮಣ್ಣ, ಬಾಳೆಯಡ ಪ್ರತೀಷ್, ಕೊಟ್ಟಂಗಡ ಸೂರಜ್ ಪಾಲ್ಗೊಂಡಿದ್ದರು.