ಕುಶಾಲನಗರ, ಅ. ೧೮: ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಕೆ.ಎಸ್. ಭಗವಾನ್ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಕುಶಾಲನಗರ ತಾಲೂಕು ಒಕ್ಕಲಿಗ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಭಗವಾನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಗವಾನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟು ಪ್ರತಿಭಟಿಸಲಾಯಿತು.

ಈ ಸಂದರ್ಭ ಮಾತನಾಡಿದ ತಾಲೂಕು ಒಕ್ಕಲಿಗ ಸಂಘ ಅಧ್ಯಕ್ಷ ಎಂ.ಕೆ.ದಿನೇಶ್, ಒಕ್ಕಲಿಗ ಸಮುದಾ ಯದ ಬಗ್ಗೆ ಅವಹೇಳನ ಮಾಡಿರುವ ಭಗವಾನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಲಾಗುವುದು. ಚಿಂತಕನ ಹೆಸರಿನಲ್ಲಿ ಸಮುದಾಯಕ್ಕೆ ಕಪ್ಪು ಚುಕ್ಕಿ ಇಡಲು ಪ್ರಯತ್ನಿಸುವ ಇಂತಹ ಹೇಯ ಮನಸ್ಥಿತಿಯ ಭಗವಾನ್ ವಿರುದ್ಧ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.

ಸಮಾಜದ ಮುಖಂಡ ವಿ.ಪಿ. ಶಶಿಧರ್ ಮಾತನಾಡಿ, ಸಮಾಜದಲ್ಲಿ ಬಿರುಕು ಮೂಡಿಸುವ ಭಗವಾನ್ ನಂತಹ ಮನಸ್ಥಿತಿಯವರನ್ನು ದೂರ ಇಡುವುದು ಒಳ್ಳೆಯದು. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇವರಿಗೆ ಅವಕಾಶ ನೀಡುವ ಮುನ್ನ ಯೋಚಿಸುವ ಅಗತ್ಯವಿದೆ. ಸ್ವತಃ ತನ್ನ ಸಮುದಾಯವನ್ನೇ ಅವಹೇಳನ ಮಾಡುವ ಭಗವಾನ್ ನಡೆ ಖಂಡನೀಯ ಎಂದರು.

ನAತರ ಮೆರವಣಿಗೆಯಲ್ಲಿ ಕುಶಾಲನಗರ ಪೊಲೀಸ್ ಠಾಣೆಗೆ ತೆರಳಿ ಭಗವಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ಸಲ್ಲಿಸಲಾಯಿತು.

ಈ ಸಂದರ್ಭ ಕೆ.ಪಿ. ಚಂದ್ರಕಲಾ, ಬಿ.ಬಿ. ಭಾರತೀಶ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಎಂ.ಡಿ. ರಂಗಸ್ವಾಮಿ, ಜಿ.ಬಿ. ಜಗದೀಶ್ ಸಮಾಜದ ಪ್ರಮುಖರು ಇದ್ದರು.