ಸೋಮವಾರಪೇಟೆ, ಅ. ೧೭: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಇದರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರ ಮುಖಂಡರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ಹಲವು ಭಾಗ್ಯಗಳ ಮೂಲಕ ಜನರನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದಿದೆ. ಇಡೀ ರಾಜ್ಯದಲ್ಲಿ ಜನಜೀವನ ದುಸ್ತರವಾಗಿದೆ ಎಂದು ಭಾರತೀಶ್ ಆರೋಪಿಸಿದರು. ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡದೇ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಯೋಜನೆಗಳಿಗೆ ಅರ್ಜಿ ಹಾಕಿದವರಿಗೆ ‘ಸರ್ವರ್ ಹ್ಯಾಕ್’ ಮಾಡಿ ಅರ್ಜಿ ಸ್ವೀಕಾರ ಸ್ಥಗಿತಗೊಳಿಸಿದ್ದಾರೆ. ರೈತರಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ನೀಡದೇ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆಗಳು, ಕೋಮು ದ್ವೇಷದ ಗಲಾಟೆಗಳು, ಗಣೇಶೋತ್ಸವ ಆಚರಣೆಗೂ ಅಡೆತಡೆಗಳು ಮಾಮೂಲಾಗಿದೆ ಎಂದು ದೂರಿದರು.

ಮುಂದಿನ ಚುನಾವಣೆಗಾಗಿ ಇಡೀ ರಾಜ್ಯದ ಜನರನ್ನು ಲೂಟಿ ಮಾಡಿ ಸುಮಾರು ೮೫ ಕೋಟಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ಕಾಂಗ್ರೆಸ್ ಮುಖಂಡರು ಶೇಖರಿಸಿಟ್ಟು ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಶೇ. ೪೦ ಕಮಿಷನ್ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್, ಯಾವುದೇ ದಾಖಲೆಗಳನ್ನು ನೀಡದೇ ಜನರನ್ನು ಮೋಸಗೊಳಿಸಿತ್ತು. ಇದೀಗ ಕಾಂಗ್ರೆಸ್ ನಾಯಕರ ಎಡ-ಬಲವಾಗಿ ಓಡಾಡುತ್ತಿದ್ದವರ ಮನೆಯಲ್ಲಿ ದೊಡ್ಡಮಟ್ಟದ ಹಣ ಸಿಗುತ್ತಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಂಡಲ ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಬಿಜೆಪಿ ಮುಖಂಡರಾದ ಮಹೇಶ್ ತಿಮ್ಮಯ್ಯ, ಭುವನೇಶ್ವರಿ, ಹೆಚ್.ಕೆ. ಮಾದಪ್ಪ, ಬಿ.ಆರ್. ಮಹೇಶ್, ಮೋಕ್ಷಿಕ್, ದರ್ಶನ್ ಜೋಯಪ್ಪ, ಚಂದ್ರಶೇಖರ್, ಯಶಾಂತ್‌ಕುಮಾರ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.