ಮಡಿಕೇರಿ, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವ ನಡೆದ ನಂತರದಲ್ಲಿ ನಡೆಯುವ ಪರಂಪರೆಯಾದ ಕಣಿಪೂಜೆ ಇಂದು ಜಿಲ್ಲೆಯಲ್ಲಿ ಭಕ್ತಿ ಭಾವದೊಂದಿಗೆ ಆಚರಿಸಲ್ಪಟ್ಟಿತು.

ಕೊಡವ ಜನಾಂಗದವರು ಸೇರಿದಂತೆ ಮೂಲ ನಿವಾಸಿಗಳು ತೀರ್ಥೋದ್ಭವ ನಂತರದ ಮುಂಜಾನೆ ತಮ್ಮ ತಮ್ಮ ಮನೆಗಳಲ್ಲಿ ಕಾವೇರಿ ಮಾತೆಯ ಆಕೃತಿಯನ್ನು ಮಾಡಿ ಹೂವು - ಹಣ್ಣುಗಳೊಂದಿಗೆ ಶೃಂಗರಿಸುತ್ತಾರೆ. ಈ ರೀತಿ ಅಲಂಕರಿಸಿದ ಕಾವೇರಿ ಮಾತೆಗೆ ಪತ್ತಾಕ್ ಸೇರಿದಂತೆ ಇನ್ನಿತರ ಆಭರಣಗಳನ್ನು ತೊಡಿಸಿ ಪೂಜಿಸಲಾಗುತ್ತದೆ. ತೀರ್ಥ ಪೂಜೆಯೊಂದಿಗೆ, ಮಾತೆಗೆ ಅಕ್ಕಿ ಹಾಕಿ ನಮಿಸುವುದರೊಂದಿಗೆ ಕಿರಿಯರು, ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳುವುದು ಕಾರೋಣರ ನೆಲೆ, ಕೈಮಡ, ಐನ್‌ಮನೆಗಳಿಗೆ ತೆರಳಿ ಪೂರ್ವಜರ ಆಶೀರ್ವಾದ ಪಡೆಯುವುದು ಅನಾದಿಕಾಲದಿಂದಲೂ ನಡೆದು ಬಂದಿರುವ ಪದ್ಧತಿಯಾಗಿದೆ.

ಕಣಿಪೂಜೆಯೊಂದಿಗೆ ಗದ್ದೆಯಲ್ಲಿ ಹಾಗೂ ಇತರೆಡೆಗಳಲ್ಲಿ ಹಾಕಿರುವ ಬೆತ್ತ್ (ಬೊತ್ತು) ಗೆ ಸೂರ್ಯೋದಯಕ್ಕೂ ಮುನ್ನ ದೋಸೆ ಇಟ್ಟು ನಮಿಸುವುದೂ ನಡೆಯುತ್ತದೆ. ಈ ಬಾರಿ ಬುಧವಾರ ಮುಂಜಾನೆ ೧.೨೬ಕ್ಕೆ ತೀರ್ಥೋದ್ಭವವಾದ ಹಿನ್ನೆಲೆಯಲ್ಲಿ ಈ ದಿನ ಮುಂಜಾನೆಯೇ ಕಣಿಪೂಜೆ ನಡೆಸಲಾಯಿತು. ಸೂರ್ಯೋದಯದ ನಂತರದಲ್ಲಿ ತೀರ್ಥೋದ್ಭವ ಜರುಗಿದಲ್ಲಿ ಮರುದಿನ ಮುಂಜಾನೆ ಈ ಪದ್ಧತಿ ಆಚರಿಸಲಾಗುತ್ತದೆ. ಇದರಂತೆ ಇಂದು ಮನೆ ಮನೆಗಳಲ್ಲಿ ಕಣಿಪೂಜೆಯ ಧಾರ್ಮಿಕ ಸಂಪ್ರದಾಯ ನೆರವೇರಿತು.