ಭಾಗಮಂಡಲ, ಅ. ೧೭: ತಲಕಾವೇರಿಯಲ್ಲಿ ಜರುಗಿದ ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಮಾತೆಯನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಕೊಡವ ಸಮು ದಾಯದವರು ಈ ಹಿಂದಿನ ವರ್ಷಗಳ ವೈಭವವನ್ನು ಪಾದಯಾತ್ರೆಯ (ಕಾವೇರಿ ನಡ್ಪ್) ಮೂಲಕ ಕ್ಷೇತ್ರದತ್ತ ಹೆಜ್ಜೆ ಹಾಕಿ ಸಾಕ್ಷಿಕರಿಸಿದರು.
ವಿವಿಧ ಕೊಡವ ಸಮಾಜ ಸಂಘಟನೆ, ಸಂಘ-ಸAಸ್ಥೆಗಳು ಸೇರಿದಂತೆ ಭಕ್ತಾದಿಗಳ ಜೊತೆ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಹೆಜ್ಜೆ ಹಾಕಿದರು. ಪುರಾತನ ಕಾಲದಲ್ಲಿ ಈ ರೀತಿಯಾಗಿ ಕ್ಷೇತ್ರದತ್ತ ತೆರಳುವ ಸಂಪ್ರದಾಯವಿದ್ದು, ಇದು ಕ್ರಮೇಣ ಮರೆಯಾಗಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಈ ವೈಭವ ಮತ್ತೆ ಮರುಕಳಿಸುತ್ತಿದೆ. ಜಿಲ್ಲೆಯ ವಿವಿಧೆಡೆ ಗಳಿಂದ ಸೇರಿದಂತೆ ಬೆಂಗಳೂರು, ಮೈಸೂರು ಮತ್ತಿತರ ಭಾಗಗಳಿಂದ ಹೆಚ್ಚಾಗಿ ಆಗಮಿಸಿ, ಭಾಗಮಂಡಲದಿAದ ಪಾದಯಾತ್ರೆ ನಡೆಸ ಲಾಗುತ್ತಿದೆ. ಯುವ ಸಮೂಹದವರು ಪಾದ ಯಾತ್ರೆಯಲ್ಲಿ ಉತ್ಸುಕತೆಯಿಂದ ಭಕ್ತಭಾವದೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ವಾದರೆ ಇವರೊಂದಿಗೆ ಹಿರಿಯರೂ ಭಾಗವಹಿ ಸುತ್ತಿದ್ದಾರೆ. ಇದಕ್ಕಾಗಿ ವಿಶೇಷ ಬಸ್-ವಾಹನಗಳಲ್ಲಿ ಜನರು ಆಗಮಿಸಿದ್ದರು. ಬಳಿಕ ಎಲ್ಲರೂ ಭಾಗಮಂಡಲ ಭಗಂಡೇಶ್ವರ ಸನ್ನಿಧಿಯಲ್ಲಿ ಒಟ್ಟಾಗಿ ಕಲೆತು ಅಲ್ಲಿಂದ ಸಾಂಪ್ರದಾಯಿಕ ಉಡುಪಿನಲ್ಲಿ ತಳಿಯತಕ್ಕಿ ಬೊಳಕ್- ದುಡಿಕೊಟ್ಟ್ ಸಹಿತವಾಗಿ ಕಾವೇರಿ ಕ್ಷೇತ್ರದತ್ತ ತೆರಳಿದರು.
ದಾರಿಯುದ್ದಕ್ಕೂ ಭಜನೆ- ಹಾಡುಗಳ ಮೂಲಕ ಹೆಜ್ಜೆ ಹಾಕಲಾಯಿತು. ಬಳಿಕ ಕ್ಷೇತ್ರದ ಕೊಳದ ಸುತ್ತಲೂ ಭಕ್ತರು ಜಮಾಯಿಸಿ ಮಾತೆಯನ್ನು ಬರಮಾಡಿ ಕೊಂಡರು. ವಿವಿಧ ಸಮಾಜ ಸಂಘಟನೆಗಳ ನೇತೃತ್ವದಲ್ಲಿ ಭಕ್ತರು ಆಗಮಿಸಿದರೂ ಭಾಗಮಂಡಲ ದಿಂದ ಯಾವುದೇ ಬ್ಯಾನರ್ ಇಲ್ಲದೆ ಕೇವಲ ಕೊಡವ ಜನಾಂಗದ ಪರಂಪರೆ ಇದೆಂಬ ರೀತಿಯಲ್ಲಿ ಎಲ್ಲರೂ ಒಂದಾಗಿ ಕಲೆತು ಪಾದಯಾತ್ರೆ ನಡೆಸಲಾಗುತ್ತಿದೆ.