ಪೊನ್ನಂಪೇಟೆ, ಅ. ೧೬: ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪುಣ್ಯ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶ ಮತ್ತು ದೂರದೃಷ್ಟಿತ್ವದ ಬೋಧನೆ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಅಜ್ಞಾನವನ್ನು ತೊಲಗಿಸಿ ಇಡೀ ಮಾನವಕುಲಕ್ಕೆ ಜ್ಞಾನದ ಮೂಲಕ ಬೆಳಕು ನೀಡಿದ ಮಹಾನ್ ಪ್ರವಾದಿಯಾಗಿದ್ದಾರೆ. ತಮ್ಮ ಬದುಕಿನ ಮೂಲಕ ಪ್ರವಾದಿಯವರು ಮನುಕುಲಕ್ಕೆ ನೀಡಿದ ಸಂದೇಶದ ಕುರಿತು ವ್ಯಾಪಕ ಬೋಧನೆಯಾಗ ಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ಮಾಸಾಚರಣೆಯ ಅಂಗವಾಗಿ ಈದ್ ಮಿಲಾದ್ ಸಂರಕ್ಷಣಾ ಸಮಿತಿ ವತಿಯಿಂದ ವೀರಾಜಪೇಟೆ ಸಮೀಪದ ನಲ್ವತ್ತೊಕ್ಲಿನಲ್ಲಿ ನಡೆದ ಕಂದೂರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿಯವರ ಶಾಂತಿ ಸಂದೇಶದ ಬೋಧನೆಯಿಂದ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದರೆ ಅದು ಸಮಾಜದಲ್ಲಿ ಮತ್ತಷ್ಟು ಭಾವೈಕ್ಯತೆ ಮೂಡಲು ನೆರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಭಾಷಣಗಾರರಾದ ನೌಫಲ್ ಸಖಾಫಿ ಕಳಸ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನಲ್ವತ್ತೊಕ್ಲಿನ ಕುತ್ಬಿಯತ್ ಸಂಘದ ಅಧ್ಯಕ್ಷರಾದ ಕೆ.ಎ. ಸುಬೈರ್, ನಲ್ವತ್ತೊಕ್ಲಿನ ರಾತೀಬ್ ತಂಡದ ಖಲೀಫರಾದ ಎಂ. ಎಚ್. ಅಹಮದ್, ಹಿರಿಯ ಕಾಂಗ್ರೆಸ್ ಮುಖಂಡರಾದ ಚಿಲ್ಲವಂಡ ಕಾವೇರಪ್ಪ, ಸ್ಥಳೀಯ ಗ್ರಾ. ಪಂ. ಸದಸ್ಯರಾದ ಪಿ.ಎ. ಹನೀಫ್, ನಲ್ವತ್ತೊಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ.ಎಫ್. ಅಶ್ರಫ್, ಕಾರ್ಯದರ್ಶಿ ಡಿ. ಎಂ. ಯೂಸೂಫ್, ಐಮಂಗಲ ಜುಮಾ ಮಸೀದಿ ಅಧ್ಯಕ್ಷರಾದ ಕೋಳುಮಂಡ ರಫೀಕ್, ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಉಸ್ತಾದ್ಗಳಾದ ಸಫ್ವಾನ್ ಸಖಾಫಿ, ಹಂಸ ಮುಸ್ಲಿಯಾರ್, ಸೌಕತ್ ಮುಸ್ಲಿಯಾರ್, ಶಹೀರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ. ರಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಹಿರಿಯ ವಿದ್ವಾಂಸರಾದ ಸಯ್ಯದ್ ಮಹದಿ ತಂಗಳ್ ನೇತೃತ್ವ ನೀಡಿದರು. ನಲ್ವತ್ತೊಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಮುಬಸ್ಸಿರ್ ಅಹಸನಿ ಕಾಮಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಪಿ.ಎ. ಸಿರಾಜುದ್ದೀನ್ ಸ್ವಾಗತಿಸಿದರು. ಪಿ.ಎ. ಮಜೀದ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಶನಿವಾರ ರಾತ್ರಿ ನಡೆದ ಕಂದೂರಿ ಕಾರ್ಯಕ್ರಮಕ್ಕೆ ಸಮಿತಿ ಅಧ್ಯಕ್ಷ ಕೆ.ಎಂ. ರಫಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ರಾತ್ರಿ ಕೇರಳದ ಪ್ರಸಿದ್ಧ ವಿದ್ವಾಂಸರಾದ ಮುಳ್ಳೂರ್ಕರ ಮೊಹಮ್ಮದಾಲಿ ಸಖಾಫಿ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದರು.