ಮಡಿಕೇರಿ, ಅ. ೧೫: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನುಷ್ಯನ ಯಾವುದೇ ಕ್ರೀಡಾಚಟುವಟಿಕೆಗಳಿಗೆ ಸ್ಫೂರ್ತಿ ದೊರಕುತ್ತದೆ ಎಂದು ಮಡಿಕೇರಿ ನಗರಸಭೆ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷರಾಗಿರುವ ನೆರವಂಡ ಅನಿತಾ ಪೂವಯ್ಯ ಹೇಳಿದರು.
ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ದಸರಾ ಕ್ರೀಡಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟದ ಭಾಗವಾದ ಮ್ಯಾರಥಾನ್ ಓಟದ ಸ್ಪರ್ಧೆಗೆ ಜಿ.ಟಿ. ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆ ಮನಸ್ಸಿಗೆ ಉಲ್ಲಾಸದೊಂದಿಗೆ ದೇಹಕ್ಕೆ ಶಕ್ತಿ ತುಂಬುತ್ತದೆ. ಕ್ರೀಡಾಪಟುಗಳು ಸ್ಫೂರ್ತಿ ಯೊಂದಿಗೆ ಪಾಲ್ಗೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್ ಮಾತನಾಡಿ, ಮೈಸೂರು ದಸರಾ ದಂತೆಯೇ ಮಡಿಕೇರಿ ದಸರಾ ಕೂಡ ವಿಶ್ವವಿಖ್ಯಾತಿ ಪಡೆದಿದೆ. ದಸರಾದ ಅಂಗವಾಗಿ ಇಂತಹ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದ ರಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವೆಂದು ಹೇಳಿದರು.
ದಸರಾ ಉತ್ಸವದ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ , ಖಜಾಂಜಿ ಅರುಣ್ ಶೆಟ್ಟಿ, ದಸರಾ ಕ್ರೀಡಾಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ದಸರಾ ಕ್ರೀಡಾ ಸಮಿತಿ ಗೌರವ ಸಲಹೆಗಾರ ರವಿ, ಮನು ಮಂಜುನಾಥ್, ರಾಜು, ಕಾರ್ಯದರ್ಶಿ ಕಪಿಲ್ ಹಾಜರಿದ್ದರು.
ಕ್ರೀಡಾಕೂಟದಲ್ಲಿ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್ವರೆಗೆ ಪುರುಷರಿಗೆ, ಮಹಿಳೆಯರಿಗೆ ನೀರುಕೊಲ್ಲಿವರೆಗೆ ಮ್ಯಾರಥಾನ್ ಓಟ ನಡೆಯಿತು. ಶಾಲಾ ಮಕ್ಕಳಿಗೂ ರಸ್ತೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮ್ಯಾರಥಾನ್ ನಂತರ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮುಕ್ತ ಪುರುಷರ ಫುಟ್ಬಾಲ್ ಹಾಗೂ ಬಾಸ್ಕೆಟ್ ಬಾಲ್ ಪಂದ್ಯಾವಳಿ ನಡೆಯಿತು.
ಅನಿತಾ ಪೂವಯ್ಯ ಅವರು ಕಾಲ್ಚೆಂಡನ್ನು ಗೋಲ್ ಪೊಸ್ಟ್ಗೆ ಒದೆಯುವ ಮೂಲಕ ಹಾಗೂ ಪ್ರಕಾಶ್ ಆಚಾರ್ಯ ಗೋಲಿಯಾಗಿ ಚೆಂಡನ್ನು ತಡೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.