ಮಡಿಕೇರಿ, ಅ. ೧೫: ಶಾಸಕ ಡಾ. ಮಂಥರ್ ಗೌಡ ಅವರು ಮಡಿಕೇರಿಯ ಕರಗ ಹಾಗೂ ದಶಮಂಟಪ ಸಮಿತಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.

ಕಳೆದ ವರ್ಷದಿಂದ ವೈಯಕ್ತಿಕವಾಗಿ ಮಂಟಪ ಸಮಿತಿಯ ಹತ್ತು ದೇವಾಲಯಗಳು ಹಾಗೂ ನಾಲ್ಕು ಕರಗ ಮಂಟಪಗಳಿಗೆ ನೆರವು ನೀಡಿದ್ದ ಡಾ. ಮಂಥರ್ ಗೌಡ, ಈ ವರ್ಷ ಕೂಡ ನೆರವಿನ ಹಸ್ತ ಚಾಚಿದ್ದಾರೆ.

ದಶಮಂಟಪ ವ್ಯಾಪ್ತಿಯ ದೇವಾಲಯಗಳಿಗೆ ಭೇಟಿ ನೀಡಿದ ಶಾಸಕರು ವೈಯಕ್ತಿಕವಾಗಿ ಕರಗ ದೇವಾಲಯಗಳಿಗೆ ತಲಾ ಐವತ್ತು ಸಾವಿರ ರೂಗಳು ಹಾಗೂ ಇತರ ದೇವಾಲಯಗಳಿಗೆ ಮೂವತ್ತು ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

ಕಳೆದ ವರ್ಷ ದಸರಾ ಸಮಯದಲ್ಲಿ ಖುದ್ದಾಗಿ ಮಂಟಪ ರಚನೆಯ ಕಾಯಕಗಳನ್ನು ತಾವು ವೀಕ್ಷಿಸಿದ್ದು ಮಂಟಪ ಸಿದ್ದತೆಯಲ್ಲಿ ನೂರಾರು ಪದಾಧಿಕಾರಿಗಳು ಪಡುವ ಶ್ರಮವನ್ನು ಕಣ್ಣಾರೆ ಕಂಡಿದ್ದು, ಈ ನಿಟ್ಟಿನಲ್ಲಿ ಮಂಟಪ ಸಮಿತಿಗಳಿಗೆ ಆದ್ಯತೆ ನೀಡಿ ಇಪ್ಪತ್ತು ಲಕ್ಷ ರೂ.ಗಳ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದೇನೆ ಎಂದು ತಿಳಿಸಿದ ಡಾ. ಮಂಥರ್ ಗೌಡ ಮಂಟಪ ಸಮಿತಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳು ಹಾಗೂ ನಗರ ಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ದಸರಾ ಸಮಿತಿ ಪ್ರಮುಖ ಟಿ.ಪಿ. ರಮೇಶ್, ಪರಿಸರ ನಿಯಂತ್ರಣ ಮಂಡಳಿ ಮಾಜಿ ನಿರ್ದೇಶಕ ಜೆ. ಜಿ. ಕಾವೇರಪ್ಪ, ಕಂಚಿ ಕಾಮಾಕ್ಷಿ ದೇವಾಲಯ ಸಮಿತಿಯ ಉಪಾಧ್ಯಕ್ಷ ತೆನ್ನೀರ ಮೈನಾ, ಜೆ.ಸಿ. ಜಗದೀಶ್ ಮಂಟಪ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.