ಮಡಿಕೇರಿ, ಅ. ೧೪: ಐತಿಹಾಸಿಕ ಮಡಿಕೇರಿ ದಸರಾ, ಜನೋತ್ಸವದ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಡಿಕೇರಿ ನಗರಸಭಾ ಅಧ್ಯಕ್ಷೆ ಹಾಗೂ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಅನಿತಾ ಪೂವಯ್ಯ ತಿಳಿಸಿದ್ದಾರೆ.

ದಸರಾ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೧೫ರಂದು(ಇAದು) ಸಂಜೆ ೪.೩೦ಕ್ಕೆ ನಗರದ ಪಂಪಿನ ಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಕರಗ ಉತ್ಸವ ಆರಂಭವಾಗಲಿದೆ. ಈ ಮೂಲಕ ಮಡಿಕೇರಿ ದಸರಾಗೆ ಚಾಲನೆ ದೊರಕಲಿದೆ. ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಒಂಭತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಲಿವೆ ಎಂದು ತಿಳಿಸಿದರು.

ಸಾಂಸ್ಕೃತಿಕ ವೈಭವ

ದಸರಾ ಹಿನ್ನೆಲೆಯಲ್ಲಿ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ.೧೫ರಿಂದ ಒಂಭತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ. ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟಿçÃಯ ಕಲಾವಿದರು ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಖ್ಯಾತ ಗಾಯಕ ವಿಜಯ್‌ಪ್ರಕಾಶ್ ಸೇರಿದಂತೆ ಹಲವು ಕಲಾವಿದರು ಆಗಮಿಸಿ ಕಾರ್ಯಕ್ರಮ ನೀಡಲಿದ್ದಾರೆ. ವಿಜಯದಶಮಿಯಂದು ಸಂಗೀತ ರಸಸಂಜೆ ಕಾರ್ಯಕ್ರಮ ಇರಲಿದೆ ಎಂದು ಮಾಹಿತಿ ನೀಡಿದರು. ಇದರೊಂದಿಗೆ (ಮೊದಲ ಪುಟದಿಂದ) ಉಪ ಸಮಿತಿಗಳಿಂದ ಕ್ರೀಡಾಕೂಟ, ಬಹುಭಾಷಾ ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಜನಪದ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುವ ಪೀಳಿಗೆಗೆ ಮನರಂಜನೆಗಾಗಿ ಯುವ ದಸರ ಕೂಡ ಜನೋತ್ಸವದ ಒಂದು ಭಾಗವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಬಾರಿ ದಸರಾದಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಸ್ವಚ್ಛತೆಯನ್ನು ಕಾಪಾಡಬೇಕು. ನಗರಸಭೆಯಿಂದ ಈಗಾಗಲೇ ರಸ್ತೆ ರಿಪೇರಿ ಕಾರ್ಯವನ್ನು ಮಾಡಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆ, ಶೌಚಾಲಯ ಸ್ವಚ್ಛತೆಗೊಳಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಅಲಂಕಾರ

ಪ್ರತಿ ವರ್ಷ ನವರಾತ್ರಿಯ ಕೊನೆಯ ಎರಡು ದಿನಗಳ ಕಾಲ ಮಾತ್ರ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಹತ್ತು ದಿನಗಳ ಕಾಲ ಕೂಡ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಈಗಾಗಲೇ ವಿದ್ಯುತ್ ಬಲ್ಬ್ಗಳನ್ನು ಅಳವಡಿಸಲಾಗುತ್ತಿದೆ. ಆಯ್ದ ಸ್ಥಳಗಳಲ್ಲಿ ಕಟೌಟ್‌ಗಳನ್ನು ಅಳವಡಿಸಲಾಗುವದು ಎಂದು ತಿಳಿಸಿದರು. ನಗರದಲ್ಲಿರುವ ಅಂಗಡಿಯವರು ಕೂಡ ದೀಪಾಲಂಕಾರ ಮಾಡಿ ನಗರದ ಅಂದಕ್ಕೆ ಸಹಕಾರ ಮಾಡಬೇಕು. ವಿಜಯದಶಮಿಯಂದು ಮಡಿಕೇರಿ ದಸರಾ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ಅವರುಗಳಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಉಪಾಧ್ಯಕ್ಷರಾದ ನೆರವಂಡ ಜೀವನ್, ಬಿ.ಎಂ.ರಾಜೇಶ್, ಅಲಂಕಾರ ಸಮಿತಿಯ ಅಜ್ಜೇಟಿರ ಲೋಕೇಶ್ ಹಾಜರಿದ್ದರು.