ಕಣಿವೆ, ಅ. ೧೪: ಕುಡಿಯುವ ನೀರಿಗೆ ಗ್ರಾಮೀಣ ಪ್ರದೇಶಗಳ ಜನರು ಹಾಹಾಕಾರ ಪಟ್ಟರೆ ಅಥವಾ ಕಲುಷಿತ ನೀರನ್ನು ಕುಡಿದು ಒಂದು ವೇಳೆ ಅಸ್ವಸ್ಥರಾದರೆ ಆಯಾಯ ಭಾಗದ ಇಂಜಿನಿಯರಿAಗ್ ಉಪ ವಿಭಾಗದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂಬುದು ಸರ್ಕಾರ ಇತ್ತೀಚೆಗೆ ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ.
ಆದರೆ ಈ ನಿಯಮ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಬಳಿಯ ಭುವನಗಿರಿ ಗ್ರಾಮಕ್ಕೆ ಅನ್ವಯವಾಗುತ್ತಿಲ್ಲವೇ ? ಹೀಗೊಂದು ಪ್ರಶ್ನೆ ಗ್ರಾಮಸ್ಥರಲ್ಲಿದೆ. ಒಂದು ಕಡೆ ಸರ್ಕಾರದ ಕೋಟ್ಯಂತರ ರೂಪಾಯಿ ಗಳನ್ನು ನೀರಿನೋಪಾದಿಯಲ್ಲಿ ಸುರಿದು ಮನೆ ಮನೆಗೆ ಜೀವಜಲ ಎಂಬ ಜಲಜೀವನ್ ಯೋಜನೆ ಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿ ಪಂಚ ವರ್ಷಗಳೇ ಕಳೆದಿವೆ. ಆದರೆ ಈ ಭುವನಗಿರಿ ಗ್ರಾಮಕ್ಕೆ ಈ ಯೋಜನೆ ಏನೆಂಬುದೇ ಅರಿವಿಲ್ಲ. ಅಂದರೆ ಇಲ್ಲಿನ ಮಂದಿಗೆ ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿ ಈ ಯೋಜನೆ ಯನ್ನೇ ಪರಿಚಯಿಸಿಲ್ಲ. ಹಾಗಾಗಿ ಇಲ್ಲಿನ ಸರಿ ಸುಮಾರು ೪೦ಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ವಾಸವಿರುವ ಈ ಮಂದಿ ಅಲ್ಲಲ್ಲೇ ಲಭ್ಯವಿರುವ ಕೊಳವೆ ಬಾವಿಗಳ ನೀರನ್ನು ಅವಲಂಬಿಸಿದ್ದಾರೆ. ಕೊಳವೆ ಬಾವಿ ಕೈಕೊಟ್ಟರೆ ದೂರದಿಂದ ನೀರನ್ನು ಹೊತ್ತು ತಂದು ಕುಡಿ ಯುತ್ತೇವೆ ಎನ್ನುತ್ತಾರೆ ಗ್ರಾಮದ ರೈತ ಗಂಗಯ್ಯ. ಇನ್ನು ರಾಜ್ಯ ಹೆದ್ದಾರಿಯ ಕಣಿವೆ ಮಾರ್ಗವಾಗಿ ಭುವನಗಿರಿ ಗ್ರಾಮಕ್ಕೆ ಬರಲು ಹಾರಂಗಿ ಬಲ ದಂಡೆಯ ಕಾಲುವೆಯ ಏರಿಯನ್ನೇ ಅವಲಂಬಿಸಿರುವ ಈ ಮಂದಿ ನೀರಾವರಿ ನಿಗಮದವರು ಸೃಷ್ಟಿಸಿರುವ ಹೊಂಡದೋಪಾದಿಯ ಗುಂಡಿಗಳು ಬಿದ್ದಿರುವ ಮತ್ತು ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ತುಂಬಿ ಮತ್ತದೇ ಹಾರಂಗಿ ಕಾಲುವೆಗೆ ಹರಿವ ಕೆಸರಿನ ರಸ್ತೆಯಲ್ಲಿ ಎದ್ದೆನೋ ಬಿದ್ದೆನೋ ಎಂದು ಸಂಚರಿಸುತ್ತಿದ್ದಾರೆ.
ರಾತ್ರಿ ವೇಳೆಯಂತೂ ಕಾಲು ಜಾರಿ ಬಿದ್ದರೆ ಹಾರಂಗಿಯ ಕಾಲುವೆಯ ನೀರಲ್ಲಿ ಹುಡುಕ ಬೇಕಾ ಗುತ್ತದೆ. ಬಿದ್ದವರ ದೇಹವನ್ನು ಅಂತಹಾ ನಿಕೃಷ್ಟ ರೀತಿಯಲ್ಲಿ ಈ ಮಂದಿ ದಿನಗಳೆಯುತ್ತಿದ್ದರೂ ಕೂಡ ಚುನಾಯಿತರು, ರಾಜಕಾರಣಿಗಳು ತಮಗೆ ಸಂಬAಧಿಸಿಲ್ಲವೆAಬAತೆ ಮೈ ಮರೆತಿದ್ದಾರೆ ಎಂದು ದೂರುತ್ತಾರೆ ಇಲ್ಲಿನ ಮಂದಿ.
ಕಾಡಾನೆಗಳ ಕಾಟ
ಇದೇ ಭುವನಗಿರಿ ಗ್ರಾಮ ಕಾಡಾನೆಗಳ ತವರಾಗಿದ್ದು ಸಂಜೆ ಯಾದೊಡನೆ ಕೃಷಿಕರು ಬೆಳೆದ ಕೃಷಿ ಫಸಲನ್ನು ಖುಷಿಯಿಂದ ತಿನ್ನಲು ಮತ್ತು ಹಾರಂಗಿ ಕಾಲುವೆಯಲ್ಲಿ ಹರಿವ ನೀರನ್ನು ಕುಡಿಯಲು ಬರುತ್ತವೆ. ಹಾಗಾಗಿ ಇಲ್ಲಿನ ಮಂದಿ ಕಿತ್ತು ನಿಂತ ರಸ್ತೆಯನ್ನು ಮತ್ತು ಕಾಡಾ ನೆಗಳು ಹೆಜ್ಜೆಯಿಡುವ ಈ ಮಾರ್ಗ ದಲ್ಲಿ ಜೀವವನ್ನು ಪಣಕ್ಕಿಟ್ಟು ಬದುಕು ತ್ತಿದ್ದಾರೆ. ಜೊತೆಗೆ ಕುಶಾಲ ನಗರ ಪುರಸಭೆಯವರು ಮತ್ತು ಕೂಡಿಗೆ ಗ್ರಾ.ಪಂ.ಯವರು ಸೃಷ್ಟಿಸಿ ರುವ ಕಸದ ತ್ಯಾಜ್ಯದ ಕೊಳ ಕಿನ ಪರಿಮಳ ಈ ಮಂದಿಯ ಬದುಕನ್ನು ತಳಮಳ ಗೊಳಿಸಿದೆ. - ಕೆ.ಎಸ್. ಮೂರ್ತಿ