ನಾಪೋಕ್ಲು, ಅ. ೧೪: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಇರುವೈಲು ರಘುರಾಮ ಅಸ್ರಣ್ಣ ಮತ್ತು ಲೀಲಾ ಅಸ್ರಣ್ಣ ದತ್ತಿನಿಧಿ ಮತ್ತು ಉಪನ್ಯಾಸ ಕಾರ್ಯಕ್ರಮ ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಇತಿಹಾಸ ಉಪನ್ಯಾಸಕ ಪರಶುರಾಮ ಅವರು ಕನ್ನಡ ನಾಡು, ನುಡಿ, ಪರಂಪರೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾಂಶುಪಾಲರು, ಸಾಹಿತಿಗಳಾದ ಬಾರಿಯಂಡ ಜೋಯಪ್ಪ ಅವರು ‘ಕೊಡಗಿನ ಆರ್ಥಿಕ ಸ್ಥಿತಿ ಅಂದು-ಇAದು’ ಈ ಕುರಿತು ತಮ್ಮ ಉಪನ್ಯಾಸದಲ್ಲಿ ೬೦ ವರ್ಷಗಳ ಹಿಂದಿನ ಬರಗಾಲ, ಆರ್ಥಿಕ ಸ್ಥಿತಿ, ಬದುಕು-ಬವಣೆ ಹಾಗೂ ಇಂದಿನ ಆರ್ಥಿಕ ಪರಿಸ್ಥಿತಿಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ಲು ನವೀನ್ ಮಾತನಾಡಿ, ದತ್ತಿನಿಧಿ ಹಾಗೂ ಪರಿಷತ್ತಿನ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಮೂಲಕ ಕನ್ನಡದ ಬಗ್ಗೆ ಒಲವು ತೋರಿಸಬೇಕೆಂದರು. ನಿವೃತ್ತ ಉಪನ್ಯಾಸಕರು ಬರಹಗಾರರು ಆದ ಕಸ್ತೂರಿ ಗೋವಿಂದಮಯ್ಯ ಮಾತನಾಡಿ, ಸುಲಭ ಸುಂದರವಾದ ಮಾತೃಭಾಷೆ ನಮ್ಮ ಕನ್ನಡ ಭಾಷೆ. ಕನ್ನಡದ ಪತ್ರಿಕೆ ಪುಸ್ತಕಗಳನ್ನು ಓದಿ ವಿದ್ಯಾರ್ಥಿಗಳು ಕನ್ನಡ ಪ್ರೇಮಿಗಳಾಗಬೇಕು. ಉತ್ತಮ ಬರಹಗಾರರು-ಸಾಹಿತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪುರಸ್ಕಾರ, ಕಥಾಸ್ಪರ್ಧೆ, ಗೀತ ಗಾಯನ ಸ್ಪರ್ಧೆ ಕವಿಗೋಷ್ಠಿ ಪ್ರಬಂಧ ಸ್ಪರ್ಧೆ ಇಂತಹ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭ ಲೋಕಾರ್ಪಣೆಗೊಂಡ ಗೌರಮ್ಮ ಮಾದಮ್ಮಯ್ಯ ಅವರ ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಕಾಲೇಜಿನ ಗ್ರಂಥಾಲಯಕ್ಕೆ ೩ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಬೈನೆರವನ ಯಶೋದಿನಿ, ಮುಕ್ಕಾಟಿ ಪುಷ್ಪ ಗಣೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರಿಶೀತ್ ಮಾದಯ್ಯ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ, ಉಪನ್ಯಾಸಕರಿಂದ ನಾಡಗೀತೆ, ಭಾವಗೀತೆ, ಕವನ ವಾಚನಗಳು ನಡೆದವು. ಜಷ್ಮಿತ ಪ್ರಾರ್ಥಿಸಿ, ಉಪನ್ಯಾಸಕಿ ಎನ್.ಎಸ್. ವಾಣಿ ಕಾರ್ಯಕ್ರಮ ನಿರೂಪಿಸಿ, ಶ್ರೀನಿವಾಸ ಸ್ವಾಗತಿಸಿ, ಯೋಗಿತ ವಂದಿಸಿದರು.