ಕಣಿವೆ, ಅ. ೧೪: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದ್ದು, ಪ್ರವಾಸಿಗರು ಪರದಾಡುವಂತಾಗಿದೆ. ಕುಶಾಲನಗರದ ಗುಡ್ಡೆಹೊಸೂರು ಕಡೆಯಿಂದ ತೆರಳುವ ಬಾಳುಗೋಡು - ರಸೂಲ್‌ಪುರ ವ್ಯಾಪ್ತಿಯಲ್ಲಿ ಎರಡು ಕಿಮೀ ರಸ್ತೆ ಪೂರ್ಣ ಹಾಳಾಗಿದೆ. ಇನ್ನು ಸಿದ್ದಾಪುರದಿಂದ ದುಬಾರೆಗೆ ಸಂಪರ್ಕ ಕಲ್ಪಿಸುವ ವಾಲ್ನೂರು ತ್ಯಾಗತ್ತೂರು ಬಳಿ ರಸ್ತೆ ಪೂರ್ಣ ಹಾಳಾಗಿದೆ. ಕಿತ್ತು ನಿಂತ ರಸ್ತೆಯೊಳಗಿನ ಗುಂಡಿಗಳನ್ನು ತಪ್ಪಿಸಿ ಮುಂದೆ ಸಾಗ ಹೊರಡುವ ವಾಹನಗಳ ಚಾಲಕರಿಗೆ ಕನಿಷ್ಟ ನಾಲ್ಕು ಗುಂಡಿಗಳು ಎದುರಾಗುತ್ತಿವೆ.

ಹಾಗಾಗಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಸಾಗುವ ಪ್ರವಾಸಿಗರಿಗೆ ಹಾಗೂ ಇತರೇ ನಿತ್ಯದ ಪ್ರಯಾಣಿಕರಿಗೆ ಸೊಂಟ ನೋವು, ಕುತ್ತಿಗೆ ನೋವು ಹಾಗೂ ಬೆನ್ನು ನೋವು ಬರುತ್ತಿದೆ. ಹಾಗಾಗಿ ರಸ್ತೆಯನ್ನು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು.

ಅದಕ್ಕೂ ಮುನ್ನಾ ಕಿತ್ತು ನಿಂತ ರಸ್ತೆಯ ಗುಂಡಿಗಳಿಗೆ ಕನಿಷ್ಟ ಪಕ್ಷ ಕೂಡಲೇ ಮಣ್ಣನ್ನಾದರೂ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂದು ನಂಜರಾಯಪಟ್ಟಣದ ವಾಹನಗಳ ಮಾಲೀಕರಾದ ಕೆ.ಎಸ್.ಮೋಹನ ಕುಮಾರ್, ಕೆ.ಎಸ್. ರತೀಶ್, ನವೀನ್, ಷಡಕ್ಷರಿ, ಪಂಚಾಕ್ಷರಿ ಮೊದಲಾದವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.