ಗೋಣಿಕೊಪ್ಪಲು, ಅ. ೧೪: ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಎಂದಿಗೂ ಹುಸಿಗೊಳಿಸಲಾರೆ, ಚುನಾವಣೆ ಪೂರ್ವ ಮತದಾರರಿಗೆ ನೀಡಿರುವ ವಾಗ್ದಾನವನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರೆಸುತ್ತಿದ್ದೇನೆ. ರಸ್ತೆ ಅಭಿವೃದ್ದಿ ಸೇರಿದಂತೆ ಇನ್ನಿತರ ಕಾಮಗಾರಿಗಳ ಬಗ್ಗೆ ಈಗಾಗಲೇ ಸಂಬAಧಿಸಿದವರಿAದ ಮಾಹಿತಿ ಪಡೆದು ಕ್ರಿಯಾಯೋಜನೆ ತಯಾರಿಸಿ ಸಂಬAಧಿಸಿದ ಇಲಾಖೆಗೆ ಹಾಗೂ ಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ೫ ತಿಂಗಳ ನಂತರ ಮೊದಲ ಬಾರಿಗೆ ನಾಲ್ಕೇರಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎ.ಎಸ್. ಪೊನ್ನಣ್ಣ ಝೋನಲ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಇವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನಿಂದಲೇ ಎಲ್ಲವೂ ಸಾಧ್ಯವಿಲ್ಲ. ಜನತೆಯ ಸಹಕಾರ ಇದ್ದಲ್ಲಿ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಎಲ್ಲದರಲ್ಲೂ ವಿಶ್ವಾಸವೇ ಅತೀ ಮುಖ. ಈ ಭಾಗದ ಜನತೆ ತೋರಿಸಿರುವ ಅತೀ ಪ್ರೀತಿಗೆ ನಾನು ಸದಾ ಚಿರಋಣಿ. ಹಲವಾರು ಅಭಿವೃದ್ದಿ ಹಾಗೂ ಕಾಮಗಾರಿ ಕಾರ್ಯಗಳಿಗೆ ಈಗಾಗಲೇ ಹೆಜ್ಜೆ ಇಡಲಾಗಿದೆ. ಪ್ರಮುಖವಾಗಿ ಬುಡಕಟ್ಟು ಆದಿವಾಸಿಗಳ ವಿದ್ಯುತ್ ಸಮಸ್ಯೆ, ರಸ್ತೆ, ಕುಡಿಯುವ ನೀರು ಇವುಗಳ ಕೆಲಸಕ್ಕೆ ಆದ್ಯತೆ ನೀಡಲಾಗಿದ್ದು ಸಾಕಷ್ಟು ಕೆಲಸ ಪ್ರಗತಿಯಲ್ಲಿದೆ. ವಿದ್ಯುತ್ ಇಲ್ಲದ ಗ್ರಾಮಗಳಿಗೆ ವಿದ್ಯುತ್ ನೀಡುವ ಕೆಲಸ ಮಾಡಲಾಗಿದೆ. ಹಬ್ಬ ಆಚರಣೆಗಳು ಯಶಸ್ವಿಯಾಗಿ ಸಾಗುತ್ತಿವೆ. ಇವೆಲ್ಲವೂ ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸದಿಂದ ಮಾತ್ರ ಸಾಧ್ಯ. ಮುಂದಿನ ಕಾವೇರಿ ಸಂಕ್ರಮಣದAದು ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಭಕ್ತಾಧಿಗಳ ನಿರೀಕ್ಷೆಯಂತೆ ಎಲ್ಲವೂ ನಡೆಯಲಿವೆ. ಕರ್ನಾಟಕ ರಾಜ್ಯದಲ್ಲಿ ಶೋಷಿತರ ಪರವಾಗಿರುವ ಸರ್ಕಾರ ಅಧಿಕಾರದಲ್ಲಿರುವುದರಿಂದ ಇವರ ಪರವಾಗಿ ಕೆಲಸಗಳು ನಿರಂತರವಾಗಿ ನಡೆಯಲಿದೆ. ಕರ್ನಾಟಕದಲ್ಲಿ ಸುಭದ್ರ ಸರ್ಕಾರ ನೀಡಲು ಜನತೆಯ ಸಹಕಾರವೇ ಕಾರಣ ಎಂದರು.

ಪಕ್ಷದ ಹಿರಿಯರಾದ ಕೆ.ಕೆ. ನಟೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೆರಿರ ನವೀನ್, ಕೆಪಿಸಿಸಿ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಸೇರಿದಂತೆ ಹಲವು ಗಣ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಟಿ.ಬಿ. ಕಾರ್ಯಪ್ಪ (ಕಟ್ಟಿ) ಬಾಡಗ ವಲಯ ಕಾಂಗ್ರೆಸ ಅಧ್ಯಕ್ಷ ಸಿ.ಎನ್. ರವಿ, ತಾ.ಪಂ. ಮಾಜಿ ಸದಸ್ಯ ಪಲ್ವೀನ್ ಪೂಣಚ್ಚ, ನಾಲ್ಕೇರಿ ಪಂಚಾಯಿತಿ ಅಧ್ಯಕ್ಷ ಜೆ.ಎಂ. ಸೋಮಯ್ಯ, ಉಪಾಧ್ಯಕ್ಷ ಜೆ.ಕೆ. ಮನು, ಬಾಡಗ ಗ್ರಾಮದ ಮಾಜಿ ವಲಯ ಅಧ್ಯಕ್ಷ ಮಲ್ಚೀರ ಅಪ್ಪಣ್ಣ, ಅಲ್ಪಸಂಖ್ಯಾತ ವಿಭಾಗದ ರಶೀದ್, ಮಾಜಿ ಗ್ರಾ.ಪಂ. ಸದಸ್ಯರಾದ ಉಷಾ, ಎಂ.ಕೆ. ಮನು ಮಾಚಯ್ಯ ಸಿ.ಎ. ದೇವಯ್ಯ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎ. ಗಣಪತಿ, ಎ.ಬಿ. ಮುತ್ತಪ್ಪ, ಬಾನಂಡ ಪ್ರಥ್ವಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಶಾಸಕರನ್ನು ಮುಖ್ಯ ರಸ್ತೆಯಿಂದ ಆದಿವಾಸಿಗಳ ನೃತ್ಯ ತಂಡವು ಅದ್ಧೂರಿಯಾಗಿ ಸ್ವಾಗತಿಸಿ ವೇದಿಕೆಗೆ ಕರೆ ತಂದರು. ಆದಿವಾಸಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ನೂತನ ಶಾಸಕರಿಗೆ ಝೋನಲ್ ಕಾಂಗ್ರೆಸ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲಿನ ಗ್ರಾಮದ ಜನತೆ ತಮ್ಮ ಅಹವಾಲುಗಳನ್ನು ಶಾಸಕರಿಗೆ ಲಿಖಿತವಾಗಿ ನೀಡಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯ ನಡೆಯಿತು. ಬುಡಕಟ್ಟು ಆದಿವಾಸಿಗಳು ಶಾಸಕರಿಗೆ ಗೌರವಿಸಿದರು. ರೈತ ಸಂಘದ ಹಿರಿಯರಾದ ಚಿಮ್ಮಂಗಡ ಗಣೇಶ್ ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು. ನಾಲ್ಕೇರಿ ಗ್ರಾಮದ ಪಕ್ಷದ ಪ್ರಮುಖರಾದ ಕರುಣ್ ದೇವಯ್ಯ ಸ್ವಾಗತಿಸಿ, ವಂದಿಸಿದರು.

-ಹೆಚ್.ಕೆ. ಜಗದೀಶ್