ಮಡಿಕೇರಿ, ಅ. ೧೫: ಮಡಿಕೇರಿ ನಗರ ಸಭೆಯ ವಿರುದ್ಧ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರಿಗೆ ನಗರ ಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯ ಪುಲಿಯಂಡ ಜಗದೀಶ್ ಲಿಖಿತ ದೂರನ್ನು ಸಲ್ಲಿಸಿದ್ದಾರೆ.

ಮಡಿಕೇರಿ ನಗರ ಸಭೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದ ನಡುವೆ ಸಮನ್ವಯತೆಯ ಕೊರತೆಯಿಂದ ಸಾರ್ವಜನಿಕರ ಯಾವುದೇ ಕೆಲಸವಾಗುತ್ತಿಲ್ಲ.

ಅಧಿಕಾರಿಗಳು ಮತ್ತು ನೌಕರರು ಇತ್ತೀಚೆಗೆ ಯಾವುದೇ ಸೂಚನೆ ಇಲ್ಲದೆ,ಮೇಲಿನ ಪ್ರಾಧಿಕಾರಕ್ಕೆ ಮಾಹಿತಿ ನೀಡದೆ ದಿಢೀರ್ ಆಗಿ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುವ ಮೂಲಕ ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ನು ಉಲ್ಲಂಘಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ನಗರಸಭೆಯಲ್ಲಿ ಕಾನೂನು ಬಾಹಿರ ಪ್ರಕರಣಗಳು ನಡೆಯುತ್ತಿವೆ ಎಂದು ಆಪಾದಿಸಲಾಗಿದೆ. ಅಲ್ಲದೇ ಆಡಳಿತ ಮಂಡಳಿಯನ್ನು ತಾತ್ಕಾಲಿಕವಾಗಿ ಅಮಾನತ್ತಿಗೆ ಒಳಪಡಿಸಿ, ಆಗಿರುವ ಲೋಪಗಳನ್ನು ಸರಿಪಡಿಸಿ ಮಡಿಕೇರಿ ನಗರ ಸಭೆಯನ್ನು ಮಾದರಿ ನಗರ ಸಭೆಯನ್ನಾಗಿ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.