ವೀರಾಜಪೇಟೆ, ಅ. ೧೩: ಪತ್ನಿಯ ನಿಧನದಿಂದ ಮಾನಸಿಕವಾಗಿ ನೊಂದ ಪತಿ ನೇಣಿಗೆ ಶರಣಾದ ಘಟನೆ ನಡೆದಿದೆ. ವೀರಾಜಪೇಟೆ ವಿದ್ಯಾನಗರದ ನಿವಾಸಿ ತರಕಾರಿ ವ್ಯಾಪಾರಿ ಜಲಾಲುದ್ದೀನ್ (ಸೈಫು-೬೮) ನೇಣಿಗೆ ಶರಣಾದ ವ್ಯಕ್ತಿ.

ಜಲಾಲುದ್ದೀನ್ ಅವರ ಪತ್ನಿ ಕೈರುನ್ನಿಸ್ಸಾ ಅನಾರೋಗ್ಯದಿಂದ ಸುಮಾರು ೧೫ ದಿನಗಳ ಹಿಂದೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಪತ್ನಿಯ ಅಗಲಿಕೆಯಿಂದಾಗಿ ಮಾನಸಿಕವಾಗಿ ಜಲಾಲುದ್ದೀನ್ ಮನನೊಂದಿದ್ದರು. ತಾ. ೧೨ ರಂದು ರಾತ್ರಿ ಸುಮಾರು ೧೧ ಗಂಟೆಗೆ ತಮ್ಮ ಮನೆಗೆ ತೆರಳುವ ಮೆಟ್ಟಿಲುಗಳಿಗೆ ಅಳವಡಿಸಲಾಗಿದ್ದ ಕಬ್ಬಿಣದ ಸಲಾಕೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುAಜಾನೆಯ ಸಮಯ ಅಪಾರ್ಟ್ಮೆಂಟ್‌ನ ನಿವಾಸಿ ಹಾಲು ತರಲೆಂದು ಹೊರಟ ಸಮಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಂತರ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ಮೃತರ ಮಗ ಅಬ್ದುಲ್ ವಾಸೀಂ ವೀರಾಜಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

-ಕಿಶೋರ್‌ಕುಮಾರ್ ಶೆಟ್ಟಿ