ಸುಂಟಿಕೊಪ್ಪ, ಅ. ೧೨: ಸುಂಟಿಕೊಪ್ಪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಉಳಿದ ೭ ಸ್ಥಾನಗಳಿಗೆ ತಾ.೧೬ ರಂದು ಚುನಾವಣೆ ನಡೆಯಲಿದೆ.

ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ಬೆಳವಣಿಗೆಯಿಂದ ೧೩ ಸ್ಥಾನಗಳಲ್ಲಿ ೬ ಸ್ಥಾನಗಳಲ್ಲಿ ಅವಿರೋಧ ಆಯ್ಕೆ ಈಗಾಗಲೇ ನಡೆದಿದ್ದು, ಉಳಿದ ೭ ಸ್ಥಾನಕ್ಕೆ ನಡೆಯುವ ಚುನಾವಣೆ ಕೌತುಕಕ್ಕೆ ಕಾರಣವಾಗಿದೆ. ಸಂಘ ಹಿಂದಿನಿAದಲೂ ಬಿಜೆಪಿ ಬೆಂಬಲಿತರ ಆಡಳಿತದಲ್ಲಿದ್ದು, ಕಾಂಗ್ರೆಸ್‌ನ ಕೆಲವು ನಿರ್ದೇಶಕರು ಆಡಳಿತ ಮಂಡಳಿಯಲ್ಲಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿ ಸ್ಥಾನ ಹಂಚಿಕೆಯ ಪ್ರಸ್ತಾಪಕ್ಕೆ ಹಿರಿಯ ಸಹಕಾರಿಗಳು ಮುಂದಾದರು. ಪರಿಣಾಮವಾಗಿ ಇಂತಿಷ್ಟು ಸೀಟು ಬಿಜೆಪಿಗೆ ಹಾಗೂ ಕಾಂಗ್ರೆಸ್‌ಗೆ ಹಂಚಿಕೆ ಸೂತ್ರ ಅಳವಡಿಸಿ ಯಶಸ್ವಿಯಾಗಿದ್ದಾರೆ. ಆದರೆ ಸಾಲಗಾರರ ಸಾಮಾನ್ಯ ೬ ಕ್ಷೇತ್ರದಲ್ಲಿ ಹಾಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಬಿಗಿಪಟ್ಟಿನಿಂದ ಚುನಾವಣೆಯು ತಾ.೧೬ ರಂದು ನಡೆಯಲಿದೆ.

ಸಾಲಗಾರರ ಸಾಮಾನ್ಯ ೬ ಕ್ಷೇತ್ರಕ್ಕೆ ಉದಯಕುಮಾರ್ ಪಟ್ಟೆಮನೆ, ಜೆರ್ಮಿಡಿಸೋಜ, ಕ್ಲೆöÊವಾ ಪೊನ್ನಪ್ಪ, ಮೋಹನ್ ಆರ್.ಆರ್. ಕುಂಜಿಲನ ಮಂಜುನಾಥ್, ಕೆ.ಆರ್.ಮಂಜುನಾಥ್ ಹಾಗೂ ಡಾ.ಶಶಿಕಾಂತ ರೈ ಸ್ಪರ್ಧಾ ಕಣದಲ್ಲಿರುವುದರಿಂದ ಚುನಾವಣೆ ನಡೆಯಲಿದೆ. ಪಕ್ಷೇತರ ಅಭ್ಯರ್ಥಿ ಮೋಹನ್ ನಾಮಪತ್ರ ಹಿಂಪಡೆಯಲು ಬಿಗಿಪಟ್ಟು ಹಿಡಿದಿರುವುದರ ಪರಿಣಾಮ ಚುನಾವಣೆ ಅನಿವಾರ್ಯವಾಗಿದೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಬಿ.ಕೆ.ದಯಾನಂದ ಹಾಗೂ ಐ. ಸೋಮನಾಥ್ ಸ್ಪರ್ಧಿಸಿದ್ದಾರೆ.

ಉಳಿದಂತೆ ಸಾಲಗಾರಲ್ಲದ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ದಾಸಂಡ ರಮೇಶ ಚಂಗಪ್ಪ, ಹಿಂದುಳಿದ ವರ್ಗದ (ಬಿ) ಕ್ಷೇತ್ರದಿಂದ ಎಂ.ಎನ್.ಕೊಮಾರಪ್ಪ, ಹಿಂದುಳಿದ ವರ್ಗ(ಎ) ಕ್ಷೇತ್ರದಿಂದ ಕೆ.ಪಿ.ಜಗನ್ನಾಥ್, ಮಹಿಳೆಯರ ಮೀಸಲು ಕ್ಷೇತ್ರದಿಂದ ಪಿ.ಪಿ.ಲೀಲಾವತಿ, ಕೆ.ವಿ. ರಮ್ಯ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಡಿ.ಕೆ.ಗಂಗಾಧರ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.