ಐಗೂರು, ಅ. ೧೨: ಸೋಮವಾರಪೇಟೆ ತಾಲೂಕಿನ ಐಗೂರು ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮಳೆಯಾಗದಿದ್ದರೂ, ಈಗ ಮೂರು ನಾಲ್ಕು ದಿನಗಳಿಂದ ಮಳೆ ಬೀಳುತ್ತಿದ್ದು ಈ ಭಾಗದ ಯಡವಾರೆ, ಕಾಜೂರು, ಹೊಸತೋಟ ಭಾಗದ ರೈತರ ಮೊಗದಲ್ಲಿ ಮಂದಹಾಸ ಬೀರುತ್ತಿದೆ. ಬತ್ತಿಹೋದ ಜಲಮೂಲಗಳು ಸಣ್ಣ ಪ್ರಮಾಣದಲ್ಲಿ ಜಲ ಮೂಲಗಳಾಗಿ ಮಾರ್ಪಾಡಾಗುವ ಲಕ್ಷಣಗಳು ಕಂಡುಬರುತ್ತಿದೆ.

ಐಗೂರಿನ ಚೋರನ ಹೊಳೆಯಲ್ಲಿ ನೀರಿನ ಒಳ ಅರಿವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಬೆಳೆಗಳಾದ ಕಾಫಿ, ಒಳ್ಳೆಮೆಣಸು, ಬೆಳೆಗಳಿಗೆ ಈ ಮಳೆಯು ಅನುಕೂಲಕರವಾಗಿದ್ದು, ವಾಡಿಕೆಯ ಮಳೆ ಬಾರದಿದ್ದು ಕಳೆದ ಸಾಲಿಗಿಂತ ೩೦ ಇಂಚು ಕಡಿಮೆ ಮಳೆ ಆಗಿರುವುದರಿಂದ ಉತ್ತಮ ಫಸಲು ಆಗಿರುವುದಿಲ್ಲ. ಕಳೆದ ಸಾಲಿಗಿಂತ ಫಸಲು ನಷ್ಟ ಸಂಭವಿಸಿದ್ದು, ಈ ಭಾಗದ ರೈತಾಪಿ ಜನರು ಸಂಕಷ್ಟಗಳನ್ನು ಎದುರಿಸುವ ಸಂಭವಿದೆ. ಹಲವಾರು ರೈತರು ಕಾಫಿ ತೋಟಗಳನ್ನು ಲಾಭದಿಂದ ನಿರ್ವಹಣೆ ಮಾಡಲು ಸಾಧ್ಯವಾಗದೆ ಒಪ್ಪಂದದ ಮೂಲಕ ಬೇರೆಯವರಿಗೆ ತೋಟಗಳನ್ನು ನಿರ್ವಹಣೆ ಮಾಡಲು ಬಿಟ್ಟು ಕೊಟ್ಟಿರುತ್ತಾರೆ. ಅರೇಬಿಕಾ ಕಾಫಿಯ ದರ ಕುಸಿದಿದ್ದು, ಶುಂಠಿಯ ದರ ಸ್ವಲ್ಪ ಹೆಚ್ಚಾಗಿದೆ. ಕಾಫಿ ಹಣ್ಣು ಬಿಡಿಸುವ ಸಂದರ್ಭದಲ್ಲಿ ಮಳೆಯು ಮುಂದುವರಿದರೆ ಕಾಫಿ ಒಣಗಿಸಲು ಕಷ್ಟ ಸಾಧ್ಯ ಎಂಬುದು ಈ ಭಾಗದ ಕೃಷಿಕರಾದ ಲಿಂಗೇರಿ ರಾಜೇಶ್, ಕೆ.ಪಿ. ಮುತ್ತಪ್ಪ, ಬಾರನ ಪ್ರಮೋದ್ ಮತ್ತು ಆನಂದ ಅವರ ಅಭಿಪ್ರಾಯವಾಗಿದೆ.