ಮಡಿಕೇರಿ, ಅ. ೧೨: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ಸಂದರ್ಭದಲ್ಲಿ ಮಹತ್ವವಿರುವದೇ ಪವಿತ್ರ ತೀರ್ಥಕ್ಕಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ತೀರ್ಥೋದ್ಭವದ ಬಳಿಕ ತೀರ್ಥವನ್ನು ತಮ್ಮ ತಮ್ಮ ಮನೆಗೆಂದು ಸಂಗ್ರಹಿಸಿ ತೆರಳುವುದು ವಾಡಿಕೆ. ಕ್ಷೇತ್ರಕ್ಕೆ ಬರುವ ಭಕ್ತರು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಗಳಿಗೆ, ರಾಜ್ಯದ ವಿವಿಧೆಡೆಗಳಿಗೂ ವಿವಿಧ ಸಂಘ - ಸಂಸ್ಥೆ, ಸಮಾಜಗಳ ಮೂಲಕ ತೀರ್ಥವನ್ನು ಕೊಂಡೊಯ್ದು ಭಕ್ತರಿಗೆ ವಿತರಿಸಲಾಗುತ್ತದೆ.

ಇವೆಲ್ಲವೂ ಕೇವಲ ಒಂದು - ಎರಡು ದಿನಗಳ ಪ್ರಕ್ರಿಯೆ ಮಾತ್ರವಾಗಿರುತ್ತದೆ. ಆದರೆ ಯಾತ್ರಾರ್ಥಿಗಳು ಸಂಘ - ಸಂಸ್ಥೆಗಳವರು ತೀರ್ಥವನ್ನು ಶೇಖರಿಸಿಕೊಂಡು ಹೋಗಲು ಪ್ಲಾಸ್ಟಿಕ್ ಬಿಂದಿಗೆ, ಬಾಟಲಿ, ಕ್ಯಾನ್‌ಗಳನ್ನು ಬಳಸಬಾರದು ಎಂಬ ನಿರ್ಬಂಧ ವಿಧಿಸಿರುವ ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆ ಕ್ರಮ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಇದು ಎಷ್ಟು ಸಮಂಜಸ ಎಂದು ಪ್ರಶ್ನಿಸುತ್ತಿದ್ದಾರೆ.

ಬಿಂದಿಗೆ, ಬಾಟಲಿ, ಕ್ಯಾನ್‌ಗಳಂತಹ ಉತ್ಪನ್ನ ಬಳಸಬಾರದು ಎಂದು ಹೇಳಲಾಗಿದೆ. ಆದರೆ ಇದಕ್ಕೆ ಪರ್ಯಾಯವೇನು? ಎಂದು ಸೂಚಿಸಿಲ್ಲ. ಭಕ್ತರಿಗೆ ತೀರ್ಥವನ್ನು ಕೊಂಡೊಯ್ಯಲು ಬಹುತೇಕ ಈ ಉತ್ಪನ್ನಗಳೇ ಹೆಚ್ಚು ಸಹಕಾರವಾಗಲಿದೆ ಎಂಬದು ವಾಸ್ತವ ಕೂಡ. ಇದರ ಬದಲು ತಾಮ್ರದ ಬಿಂದಿಗೆ, ಬಕೆಟ್, ಗಾಜಿನ ಬಾಟಲಿನಂತಹ ವಸ್ತುಗಳನ್ನು ಇಲ್ಲಿ ಬಳಸುವುದು ತೀರಾ ಕಷ್ಟಕರವಾಗುತ್ತದೆ. ಜನರ ನೂಕುನುಗ್ಗಲು ಒಂದೆಡೆಯಾದರೆ, ದೂರದ ಪ್ರದೇಶಕ್ಕೆ ಸುಲಭವಾಗಿ ತೀರ್ಥ ಸಾಗಿಸಲು ಕೂಡ ಇದು ಕ್ಲಿಷ್ಟಕರ ಎಂಬದು ಎಲ್ಲರಿಗೂ ಅರಿವಿದೆ.

ಇಲ್ಲಿ ಅರ್ಥೈಸಿಕೊಳ್ಳಬೇಕಾದ ಮತ್ತೊಂದು ವಿಚಾರವೆಂದರೆ ತೀರ್ಥವನ್ನು ಕೊಂಡೊಯ್ಯಲು, ಪ್ಲಾಸ್ಟಿಕ್ ಬಾಟಲ್, ಕ್ಯಾನ್, ಬಿಂದಿಗೆ ಇತ್ಯಾದಿಗಳನ್ನು ತರುವ ಯಾರೊಬ್ಬರೂ ಇದನ್ನು ಕ್ಷೇತ್ರದಲ್ಲಿ ಬಿಟ್ಟು ತೆರಳುವ ಪ್ರಸಂಗವೇ ಇಲ್ಲ. ಇದರಿಂದಾಗಿ ಪರಿಸರಕ್ಕೆ ಅಥವಾ ಕ್ಷೇತ್ರಕ್ಕೆ ತೀರ್ಥೋದ್ಭವದ ಸಂದರ್ಭದಲ್ಲಿ ಧಕ್ಕೆಯಾಗಲಿದೆ ಎಂಬದನ್ನು ಯಾರೂ ಒಪ್ಪಲಾಗದು. ಪ್ಲಾಸ್ಟಿಕ್ ನಿಷೇಧ ವಿಚಾರಕ್ಕೆ ಸಂಬAಧಿಸಿದAತೆ ಹಲವು ಮಾರ್ಗಗಳಿವೆ.

ಆದರೆ ಒಂದು ದಿನದ ಜನರ ಅಗತ್ಯತೆಗಳಿಗೆ ಅಡ್ಡಿಪಡಿಸುವುದು ಎಷ್ಟು ಸರಿ ಎಂಬದು ಇಲ್ಲಿ ಪ್ರಶ್ನಾರ್ಹವಾಗಿದೆ. ಈ ಬಗ್ಗೆ ಕಚೇರಿಯಲ್ಲಿ ಕುಳಿತು ಸುತ್ತೋಲೆ ಹೊರಡಿಸುವ ಮಂದಿ ವಾಸ್ತವತೆ ಅರಿತು ಚಿಂತನೆ ನಡೆಸಿ ನಿರ್ಧಾರ ಪ್ರಕಟಿಸುವುದು ಒಳಿತು.

- ಶಶಿ