ಮಡಿಕೇರಿ, ಅ. ೧೧: ಏಳನೇ ಹೊಸಕೋಟೆಯ ಕೊಂಡೂರುವಿನಲ್ಲಿ ನಡೆಸಲ್ಪಡುತ್ತಿರುವ ವಿಕಾಸ ಜನ ಸೇವಾ ಟ್ರಸ್ಟ್ಗೆ ಸೇರಿರುವ ಅನಾಥಾಶ್ರಮದಲ್ಲಿ ಇದೀಗ ಶೋಕದ ಛಾಯೆ ಆವರಿಸಿದೆ.

ಆಶ್ರಮದಲ್ಲಿ ಸುಮಾರು ೩೨ ಮಂದು ಆಶ್ರಯ ಪಡೆದುಕೊಂಡಿದ್ದು, ಇವರೆಲ್ಲರಿಗೆ ಆಸರೆದಾತರಾಗಿದ್ದ ಟ್ರಸ್ಟ್ನ ಅಧ್ಯಕ್ಷ ರಮೇಶ್ ಹಾಗೂ ರೂಪ ಅವರು ಸಿಲಿಂಡರ್ ಸ್ಫೋಟದಿಂದಾಗಿ ದುರಂತ ಸಾವಿಗೀಡಾಗಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ. ಇದೀಗ ಮುಂದೇನು..? ಎಂಬ ಜಟಿಲ ಪ್ರಶ್ನೆ ಎದುರಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ದಂಪತಿ ತಮ್ಮ ಸೇವಾಟ್ರಸ್ಟ್ನ ಮೂಲಕ ನಿರ್ಗತಿಕರಿಗೆ ಆಶಾ ಕಿರಣದಂತಿದ್ದರು. ಇವರ ಈ ಸೇವೆಯ ಬಗ್ಗೆ ಯಾರಲ್ಲೂ ಎರಡು ಮಾತಿಲ್ಲ.

ಸಧ್ಯದ ಮಟ್ಟಿಗೆ ಈ ಆಶ್ರಯಧಾಮದಲ್ಲಿ ನೆಲೆಸಿರುವ ಮಂದಿಯೇ ತಮ್ಮ ದಿನನಿತ್ಯದ ಅಗತ್ಯತೆಗಳನ್ನು ಟ್ರಸ್ಟ್ನ ಉಪಾಧ್ಯಕ್ಷೆಯಾಗಿರುವ ಪದ್ಮಶ್ರೀ ಪ್ರಶಸ್ತಿ ವಿಜೇತರೂ ಆದ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಇತರ ಹಲವರ ಸಹಕಾರದಿಂದ ಗಮನಿಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿರುವ ಕೆಲವು ಮಂದಿಗೆ ತುರ್ತು ಸೇವೆಯ ಅಗತ್ಯತೆಗಳಿರುವುದು ಸ್ವಯಂ ಕೆಲಸಕ್ಕೆ ತೊಂದರೆಯಾಗಿದೆ. ಈ ಬಗ್ಗೆ ‘ಶಕ್ತಿ’ ಟ್ರಸ್ಟ್ ಉಪಾಧ್ಯಕ್ಷೆ ರಾಶಿ ಮಾಚಯ್ಯ ಅವರ ಅಭಿಪ್ರಾಯ ಬಯಸಿತು. ಸಾಕಷ್ಟು ಆಶಾಭಾವನೆಯನ್ನು ಹೊಂದಿರುವ ಇವರು ಕಣ್ಣೀರು ಹರಿಸುತ್ತಾರೆ. ಇನ್ನೂ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲಾರದೆ ತೊಳಲಾಡುತ್ತಿರುವ ಇವರು ಏನೇ ಸಂಕಷ್ಟ ಬಂದರೂ ಈ ಸಂಸ್ಥೆಯನ್ನು ಮುಚ್ಚಲು ಬಿಡುವುದಿಲ್ಲ. ತಮ್ಮ ಕೈಲಾಗುವಷ್ಟು ದಿನವೂ ಈ ಸೇವೆ ಮುಂದುವರಿಸುವ

(ಮೊದಲ ಪುಟದಿಂದ) ಇಂಗಿತ ವ್ಯಕ್ತಪಡಿಸಿದರು. ಸದ್ಯದಲ್ಲಿ ಈ ಬಗ್ಗೆ ಟ್ರಸ್ಟ್ನ ಸಭೆ ಕರೆದು, ಇದರೊಂದಿಗೆ ಸಮಾಜ ಸೇವಯ ಮನೋಭಾವನೆಯ ಇತರ ಹಲವರನ್ನು ಸೇರಿಸಿಕೊಂಡು ಟ್ರಸ್ಟ್ ಅನ್ನು ಪುನರ್‌ರಚಿಸುವ ಕುರಿತಾಗಿ ಹೇಳಿದರು. ಎಲ್ಲದಕ್ಕೂ ಕಣ್ಮರೆಯಾದವರ ಕಾರ್ಯ ಮುಗಿದ ಬಳಿಕ ಈ ಬಗ್ಗೆ ಮುಂದಿನ ಹೆಜ್ಜೆಯಿಡಲಾಗುವುದು. ಈಗಾಗಲೇ ಶಾಸಕ ಮಂಥರ್‌ಗೌಡ ಅವರು ಸಹಕರಿಸುವ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳನ್ನೂ ಭೇಟಿ ಮಾಡಿ ಚರ್ಚಿಸಲಾಗುವುದು. ಇತರ ಜನಸೇವಾ ಮನೋಭಾವದವರ ಅಭಿಪ್ರಾಯವನ್ನೂ ಪಡೆಯಲಾಗುವುದು ಎಂದು ರಾಣಿ ಮಾಚಯ್ಯ ತಿಳಿಸಿದರು. ಎಲ್ಲದಕ್ಕೂ ‘ದೇವರಿದ್ದಾನೆ’ ಎಂಬುದು ಇವರ ನಂಬಿಕೆಯಾಗಿದೆ.

ಪ್ರಸ್ತುತ ಕೆಲವರು ಮಂದಿ ಈಗಿನ ಅಗತ್ಯತೆಗೆ ಸಹಕಾರ ನೀಡುತ್ತಿದ್ದಾರೆ. ತಮ್ಮ ಮಾಹಿತಿಯಂತೆ ಆರಂಭದಲ್ಲಿ ದಿವಂಗತ ರಮೇಶ್ ಅವರ ಸಹೋದರಿಯ ಮಗ ನವೀನ್ ಈ ಟ್ರಸ್ಟ್ ರಚನೆಗೆ ಕಾರಣಕರ್ತರಾಗಿದ್ದರು. ಬಳಿಕ ಉದ್ಯೋಗ ನಿಮಿತ್ತ ಅವರು ಇರಲಿಲ್ಲ. ಇದೀಗ ಮತ್ತೆ ಸಂಸ್ಥೆಯನ್ನು ಮುನ್ನಡೆಸಲು ಹೆಗಲು ಕೊಡುವ ಭರವಸೆ ನೀಡಿ ಮುಂದೆ ಬರುತ್ತಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಕೂಡ ಸಂಸ್ಥೆಗೆ ಕೈಜೋಡಿಸಲು ಮುಂದಾಗಿದ್ದರು. ಇವರ ಪುತ್ರರು ಸುಮಾರು ರೂ. ೮೦ ಲಕ್ಷ ವೆಚ್ಚದಲ್ಲಿ ೭ನೇ ಹೊಸಕೋಟೆಯಲ್ಲಿ ಕಟ್ಟಡವೊಂದನ್ನು ನಿರ್ಮಿಸುವ ಭರವಸೆಯಿತ್ತಿದ್ದರು. ಈ ವಿಚಾರದ ಬಗ್ಗೆಯೂ ಅಪ್ಪಚ್ಚು ರಂಜನ್ ಅವರ ಜತೆ ಮಾತುಕತೆ ನಡೆಸುವುದಾಗಿಯು ಅವರು ಹೇಳಿದರು. ಆಶ್ರಮ ನಿವಾಸಿಗಳ ಸಂಕಷ್ಟ ಹಲವು ರೀತಿಯಲ್ಲಿರುವುದು ತಮ್ಮ ಅನುಭವವಾಗಿದೆ. ಎಲ್ಲವನ್ನೂ ಹೇಳಲಾಗದು. ಆದರೆ ಯಾರನ್ನು ಬಿಡಲಾಗದು, ಜನತೆಗೆ ಸಹಕಾರವನ್ನೂ ಬಯಸಿ ಮುಂದಿನ ತೀರ್ಮಾನ ಕೈಗೊಳ್ಳಲಿರುವುದಾಗಿ ಅವರು ಗದ್ಗದಿತರಾಗಿ ನುಡಿದರು.