ಗೋಣಿಕೊಪ್ಪಲು, ಅ.೧೧: ರಾಜ್ಯದ ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಮುಂದಿನ ದಿನದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮವಾಗಿ ಹಾನಿಕಾರಕ ಪಟಾಕಿ ಮಾರಾಟ ನಿಷೇಧಗೊಳಿಸಿದೆ. ರಾಜ್ಯದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಹಾನಿಕಾರಕ ಪಟಾಕಿಯನ್ನು ನಿಷೇಧಿಸುವ ಸಲುವಾಗಿ ಮಾರಾಟಗಾರರ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿ ರಾಜ್ಯದ ಉನ್ನತ ಅಧಿಕಾರಿಗಳಿಗೆ ವಿವರ ನೀಡುವ ಸಲುವಾಗಿ ಆದೇಶ ಹೊರಬಿದ್ದಿದೆ.

ಸರ್ಕಾರದ ಹಿರಿಯ ಅಧಿಕಾರಿಗಳ ಅದೇಶದನ್ವಯ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅವರು ಗೋಣಿಕೊಪ್ಪಲಿನ ಪಟಾಕಿ ಮಾರಾಟ ದಾಸ್ತಾನಿಗೆ ದಿಢೀರ್ ದಾಳಿ ನಡೆಸಿ ಅಲ್ಲಿದ್ದ ಪಟಾಕಿಗಳನ್ನು ವಶಕ್ಕೆ ಪಡೆಯುವ ಮೂಲಕ ಮಾಲೀಕರಿಗೆ ಕಾನೂನಿನ ಬಗ್ಗೆ ತಿಳಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಮಾರಾಟ ಮಾಡಬೇಕು. ತಪ್ಪಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆಯಿತ್ತಿದ್ದಾರೆ.

ಪಟಾಕಿ ಮಳಿಗೆಗೆ ಸಂಬAಧಿಸಿ ದಂತೆ ದಾಳಿ ನಡೆಸಿದ ವೇಳೆ ಅಧಿಕಾರಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ಹಾಗೂ ಛಾಯಾ ಚಿತ್ರಗಳೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಹಾಗೂ ತಂಡ, ಗೋಣಿಕೊಪ್ಪ ಪೊಲೀಸರ ತಂಡ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಮುಂಜಾನೆ ಗೋಣಿಕೊಪ್ಪ ನಗರಕ್ಕೆ ಆಗಮಿಸಿ ಅಶೋಕ್ ಎಂಬವರ ಮನೆಯ ಬಳಿಯ ಗೋದಾಮಿನಲ್ಲಿ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿ ಮನೆ ಹಾಗೂ ದಾಸ್ತಾನು ಕೊಠಡಿಗೆ ದಾಳಿ ನಡೆಸಿದರು. ಅಲ್ಲಿದ್ದ ಹಾನಿಕಾರಕ ಪಟಾಕಿಗಳನ್ನು ವಶಕ್ಕೆ ಪಡೆದರು.

ಕಳೆದ ಹಲವಾರು ವರ್ಷಗಳಿಂದ ಲೈಸನ್ಸ್ ಪಡೆದು ಪಟಾಕಿ ವ್ಯಾಪಾರ ನಡೆಸುತ್ತಿದ್ದೇವೆ. ಉಳಿಕೆಯಾದ ಪಟಾಕಿಯನ್ನು ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದೇವೆ. ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದೇವೆ ಎಂದು ಪಟಾಕಿ ಮಾರಾಟ ಮಾಲೀಕ ಅಶೋಕ್ ತಹಶೀಲ್ದಾರ್ ಅವರಿಗೆ ಸಮಜಾಯಿಷಿಕೆ ನೀಡಿದರು.

(ಮೊದಲ ಪುಟದಿಂದ) ಸರ್ಕಾರದ ನಿಯಮದಲ್ಲಿ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಸಂಗ್ರಹಣೆ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಬೆಂಗಳೂರಿನಲ್ಲಿ ಈಗಾಗಲೇ ದುರಂತ ಸಂಭವಿಸಿ ೧೪ ಅಮಾಯಕ ಜೀವಗಳು ಬಲಿಯಾಗಿವೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿರುವುದರಿಂದ ಪರಿಶೀಲನೆ ನಡೆಸಿದ್ದೇವೆ. ಲಭ್ಯವಿರುವ ಪಟಾಕಿಗಳನ್ನು ವಶಕ್ಕೆ ಪಡೆದಿದ್ದೇವೆ. ಮುಂದೆ ವ್ಯಾಪಾರದ ಸಂದರ್ಭ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಜನನಿಬಿಡ ಪ್ರದೇಶದಲ್ಲಿ ಹಾನಿಕಾರಕ ಪಟಾಕಿ ಮಾರಾಟ ಹಾಗೂ ದಾಸ್ತಾನು ಮಾಡಕೂಡದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಅಗ್ನಿಶಾಮಕ ದಳದ ಅಧಿಕಾರಿ ಸುನೀಲ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿ ಸುಧೀಂದ್ರ, ವಿಂದ್ಯಾ, ಮಹೇಶ್, ರಾಜೇಶ್, ಸುನೀಲ್, ಸೇರಿದಂತೆ ಗೋಣಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

-ಹೆಚ್.ಕೆ. ಜಗದೀಶ್