ಮಡಿಕೇರಿ, ಅ. ೧೧: ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸರಕಾರದ ಆದೇಶದಂತೆ ಇತ್ತೀಚೆಗೆ ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಂಡಿದೆ. ಇದಾದ ನಂತರ ಕಾಲೇಜಿನಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
೨೦೨೩-೨೪ನೇ ಸಾಲಿನಲ್ಲಿ ಕಾಲೇಜಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಕೆಲವು ಮಂದಿ ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಲಾಗಿದೆ ಹಾಗೂ ಕೊಡಗು ವಿಶ್ವ ವಿದ್ಯಾನಿಲಯದಿಂದ ಯಾವುದೇ ಅತಿಥಿ ಉಪನ್ಯಾಸಕರ ನೇಮಕ ಮಾಡಿಲ್ಲ. ಇದರಿಂದ ಕಾಲೇಜಿನಲ್ಲಿ ಶೇ. ೪೦ ರಷ್ಟು ಅತಿಥಿ ಉಪನ್ಯಾಸಕರ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ.
ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಚಿತ್ವ, ಭದ್ರತೆ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳನ್ನು ಒಳಗೊಂಡ ೩೧ ಮಂದಿಯ ಸೇವೆಯನ್ನು ೨೦೨೩ ಅಕ್ಟೋಬರ್ ೧ಕ್ಕೆ ಅಂತ್ಯಗೊಳಿಸಲಾಗಿದೆ. ಅಲ್ಲದೆ ೧೪ ಮಂದಿ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕಾಲೇಜಿನ ಆಡಳಿತ ನಿರ್ವಹಣೆಗಾಗಿ ಅಂದರೆ ಕಚೇರಿ, ಶೈಕ್ಷಣಿಕ ಕಾರ್ಯಕ್ರಮ ನಿರ್ವಹಣೆ, ಪ್ರಯೋಗಾಲಯ, ಗ್ರಂಥಾಲಯ, ಉಪಕರಣಗಳ ದುರಸ್ತಿ, ಶುಚಿತ್ವ ಕಾರ್ಯ, ಲೇಖನ ಸಾಮಗ್ರಿಗಳು, ಅಭಿವೃದ್ಧಿ, ಕ್ರೀಡಾ ಖರ್ಚು, ಪಠ್ಯೇತರ ಖರ್ಚಿಗಾಗಿ) ಮಂಗಳೂರು ವಿಶ್ವವಿದ್ಯಾನಿಲಯ ಅಥವಾ ಕೊಡಗು ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯ ಧನಸಹಾಯ ಸಿಗುತ್ತಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಬಿಲ್ಲುಗಳು ಬಾಕಿ ಉಳಿದಿವೆ. ಕಾಲೇಜಿನ ಇಂಟರ್ನೆಟ್, ವಿದ್ಯುತ್ ಮತ್ತು ಲ್ಯಾಬ್, ರಾಸಾಯನಿಕಗಳು ಸೇರಿದಂತೆ ಹಲವು ಸಮಸ್ಯೆಗಳಿವೆ.
೭೫ ವರ್ಷ ಹಳೆಯದಾದ ಕಾಲೇಜಿನ ಮುಖ್ಯ ಶೈಕ್ಷಣಿಕ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕೋರ್ಸುಗಳ ಸಂಖ್ಯೆ ಹೆಚ್ಚಾಗಿದ್ದು, ತರಗತಿ ಮತ್ತು ಕಚೇರಿ ಕೊಠಡಿಗಳ ಕೊರತೆ ಎದುರಾಗಿದೆ. ಪ್ರಸ್ತುತ ಕಾಲೇಜಿನ ಪಕ್ಕದಲ್ಲಿರುವ ಪುರುಷರ ವಸತಿ ನಿಲಯ ಶಿಥಿಲಗೊಂಡಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ.
೧೫೦೦ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಸೂಕ್ತ ಸಭಾಂಗಣ ಇಲ್ಲ, ವಿದ್ಯಾರ್ಥಿಗಳಿಗೆ ಮತ್ತು ಕಚೇರಿಗೆ ಕಂಪ್ಯೂಟರ್ಗಳ ಕೊರತೆ ಇದೆ. ಹಳೆಯದಾದ ಬೆಂಚು, ಡೆಸ್ಕ್ಗಳಿದ್ದು, ಅವುಗಳನ್ನು ಬದಲಿಸಬೇಕಾಗಿದೆ. ಮಡಿಕೇರಿ ನಗರದಿಂದ ಕಾಲೇಜಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ.
ಎರಡು ವಿಶ್ವವಿದ್ಯಾನಿಲಯಗಳ ನಡುವೆ ಕಾಲೇಜಿನ ಮಾನವ ಸಂಪನ್ಮೂಲದ ಹಂಚಿಕೆಯ ಸಮಸ್ಯೆ ಎದುರಾಗಿದೆ. ೨೦೦೬ಕ್ಕೆ ಮೊದಲು ಸೇವೆಗೆ ನೇಮಕವಾದ ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಹಳೆಯ ನಿರ್ದಿಷ್ಟ ಪಿಂಚಣಿ ಯೋಜನೆಯನ್ನು ನೂತನ ವಿಶ್ವವಿದ್ಯಾನಿಲಯದಲ್ಲಿ ಮುಂದುವರೆಸದAತೆ ರಾಜ್ಯಪತ್ರದಲ್ಲಿ ಉಲ್ಲೇಖಿಸಲಾಗಿದೆ.
೨೦೦೬ರ ನಂತರ ಸೇವೆಗೆ ನೇಮಕವಾದ ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ನೂತನ ಪಿಂಚಣಿ ಯೋಜನೆಯನ್ನು ನೂತನ ವಿಶ್ವವಿದ್ಯಾಲಯದಲ್ಲಿ ಶೇ.೧೪ ರಷ್ಟು ಪಾಲನ್ನು ತನ್ನ ಆಂತರಿಕ ಸಂಪನ್ಮೂಲದಿAದ ವಿಶ್ವವಿದ್ಯಾನಿಲಯವು ಸಿಬ್ಬಂದಿಗಳ ಎನ್ಪಿಎಸ್ ಖಾತೆಗೆ ಸಂದಾಯ ಮಾಡಬೇಕಾಗಿದೆ. ಆದರೆ ನೂತನ ವಿಶ್ವವಿದ್ಯಾನಿಲಯದಲ್ಲಿನ ಆಂತರಿಕ ಸಂಪನ್ಮೂಲದ ಕೊರತೆಯ ಸಮಸ್ಯೆ, ನೂತನ ವಿಶ್ವವಿದ್ಯಾನಿಲಯದಲ್ಲಿ ಉಳಿಯಲು ಇಚ್ಛಿಸುವ ಸಿಬ್ಬಂದಿಗಳಿಗೆ ವೃತ್ತಿ ಪದೋನ್ನತಿಯ ಸಮಸ್ಯೆ, ಅತಿಥಿ ಉಪನ್ಯಾಸಕರ ವೇತನವು ಸಕಾಲಕ್ಕೆ ಬಿಡುಗಡೆಯಾಗದ ಸಮಸ್ಯೆ, ಕೊಡಗು ವಿಶ್ವವಿದ್ಯಾನಿಲಯದಡಿ ಕಾಲೇಜಿನಲ್ಲಿರುವ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದ ಕಡಿಮೆ ಅರ್ಜಿ ಸಲ್ಲಿಕೆ ಮತ್ತು ನೀರಸ ಪ್ರತಿಕ್ರಿಯೆ ಇದೆ, ಅಲ್ಲದೆ ಸ್ನಾತಕೋತ್ತರ ವಿಭಾಗಗಳು ಮುಚ್ಚಿಹೋಗುವ ಆತಂಕವಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕೊಡಗು ಜಿಲ್ಲೆಯ ಗುಡ್ಡಗಾಡು ಪ್ರದೇಶ ಮಡಿಕೇರಿಯಲ್ಲಿರುವ ಅತ್ಯಂತ ಹಳೆಯ ಮತ್ತು ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಯಾಗಿದೆ. ಇದನ್ನು ೧೯೪೯ರಲ್ಲಿ ಸರ್ಕಾರಿ ಕಾಲೇಜಾಗಿ ಸ್ಥಾಪಿಸಲಾಯಿತು. ೧೯೮೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಕಾರಣ ಈ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಯಿತು. ಈ ಸಮಯದಲ್ಲಿ ಕೆಲವು ಪ್ರಮುಖ ಹಳೆಯ ವಿದ್ಯಾರ್ಥಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಕೊಡಗಿನ ನಾಗರಿಕರು ನೀಡಿದ ಸಲಹೆಗಳ ಪರಿಣಾಮವಾಗಿ ಕಾಲೇಜನ್ನು ೧೯೯೩ರಲ್ಲಿ ಮಂಗಳೂರು, ವಿಶ್ವವಿದ್ಯಾನಿಲಯವು ಅದರ ಘಟಕ ಕಾಲೇಜುಗಳಲ್ಲಿ ಒಂದಾಗಿ ಸ್ವಾಧೀನಪಡಿಸಿಕೊಂಡಿತು. ೧೯೯೪ರಲ್ಲಿ ಸಶಸ್ತç ಪಡೆÀಗಳ ಮೊದಲ ಕಮಾಂಡರ್ ಇನ್ ಚೀಫ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನು ಕಾಲೇಜಿಗೆ ಇಡಲಾಯಿತು. ಹಳೆಯ ಮುಖ್ಯ ಕಟ್ಟಡದೊಂದಿಗೆ ಹಲವು ನ್ಯೂನ್ಯತೆಗಳಿದ್ದರೂ ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಾಲೇಜು ಶೀಘ್ರ ಶೈಕ್ಷಣಿಕ ಪ್ರಗತಿ ಸಾಧಿಸಿದೆ. ಕರ್ನಾಟಕ ಸರಕಾರ ೨೦೨೨ ನವೆಂಬರ್ ತಿಂಗಳಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೇರ್ಪಡಿಸಿ ನೂತನ ಕೊಡಗು ವಿಶ್ವವಿದ್ಯಾ ನಿಲಯವನ್ನು ಸ್ಥಾಪಿಸಿದೆ ಮತ್ತು ಇತ್ತೀಚೆಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಹುದ್ದೆಗಳು, ಚರಾಸ್ತಿ ಮತ್ತು ಸ್ಥಿರಾಸ್ಥಿಗಳನ್ನು ನೂತನ ವಿಶ್ವ ವಿದ್ಯಾನಿಲಯಕ್ಕೆ ಸೇರಿಸುವ ಸಂಬAಧವಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿದ್ದು, ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಸ್ತುತ ಕೊಡಗು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿ ಮಾರ್ಪಾಡಾಗುವ ಘಟ್ಟದಲ್ಲಿದೆ. ಮುಂದಿನ ವರ್ಷ ೨೦೨೪ಕ್ಕೆ ಕಾಲೇಜಿಗೆ ೭೫ ವರ್ಷಗಳು ತುಂಬುತ್ತಿದ್ದು, ಅಮೃತ ಮಹೋತ್ಸವದ ಆಚರಣೆಯ ಹೊಸ್ತಿಲಲ್ಲಿದೆ.
ಪ್ರಸ್ತುತ ೨೦೨೩-೨೪ನೇ ಸಾಲಿನಲ್ಲಿ ಕಾಲೇಜಿನಲ್ಲಿ ಸುಮಾರು ೧೫೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ೫೦೫ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದಾರೆ ಹಾಗೂ ದ್ವಿತೀಯ ಮತ್ತು ತೃತೀಯ ವರ್ಷದ ೮೯೩ ಪದವಿ ವಿದ್ಯಾರ್ಥಿಗಳ ಜೊತೆಗೆ ೬೫ ದ್ವಿತೀಯ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸೇರಿದವರಾಗಿದ್ದಾರೆ. ಕೊಡಗು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಈ ಕಾಲೇಜಿಗೆ ೨೦೨೩-೨೪ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಇನ್ನೂ ದಾಖಲಾಗಬೇಕಾಗಿದೆ.
ಸಾಧ್ಯವಾಗಬಹುದಾದ ಪರಿಹಾರಗಳು
ಮಂಗಳೂರು ವಿವಿ ವತಿಯಿಂದ ಬೇಕಾದ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡುವುದು ಅಥವಾ ಪ್ರಥಮ ವರ್ಷದ ಪದವಿ ತರಗತಿಗಳ ಪ್ರವೇಶಾತಿ ಶುಲ್ಕವನ್ನು ಸಂಗ್ರಹಿಸಿದ ಕೊಡಗು ವಿವಿ ವತಿಯಿಂದ ೧/೩ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡುವುದು.
ಹೊರಗುತ್ತಿಗೆ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯು ಅತ್ಯವಶ್ಯಕವಾಗಿರುವುದರಿಂದ ಅವರನ್ನು ಮಂಗಳೂರು ಮತ್ತು ಕೊಡಗು ವಿವಿ ವತಿಯಿಂದ ಕ್ರಮವಾಗಿ ೨:೧ ಅನುಪಾತದಲ್ಲಿ ನೇಮಕ ಮಾಡಿ ೨೦೨೩-೨೪ನೇ ಸಾಲಿನಲ್ಲಿ ಮುಂದುವರೆಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು,
ಕಳೆದ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲಾದ ಬಿಲ್ಲುಗಳನ್ನು ತ್ವರಿತವಾಗಿ ಪರಿಶೀಲಿಸಿ ಹಣ ಮಂಜೂರು ಮಾಡುವುದು, ಸರಕಾರದ ವತಿಯಿಂದ ನೂತನ ಕೊಡಗು ವಿಶ್ವವಿದ್ಯಾನಿಲಯಕ್ಕೆ ಸಿಗಬೇಕಾದ ಧನಸಹಾಯ ಬಿಡುಗಡೆ ಮಾಡಬೇಕಿದೆ, ಕಾಲೇಜಿನಿಂದ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯಗಳಿಗೆ ಮುಂದೆ ಸಲ್ಲಿಸಲಾಗುವ ಸಂಬAಧಿಸಿದ ಬಿಲ್ಲುಗಳಿಗೆ ಆಯಾ ವಿಶ್ವವಿದ್ಯಾನಿಲಯಗಳಿಂದ ತ್ವರಿತವಾಗಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳುವುದು.
೨೦೨೩-೨೪ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಶುಲ್ಕ ಪಾವತಿಸಿ ಸೇರಿದವರಾಗಿರುತ್ತಾರೆ. ಆದ್ದರಿಂದ ೨೦೨೩-೨೪ನೇ ಸಾಲಿನ ಆಯವ್ಯಯದಲ್ಲಿ ನಮ್ಮ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಂಚಿಕೆ ಮಾಡಲಾಗಿರುವ ಹಣವನ್ನು ಸಲ್ಲಿಸಲಾಗುವ ಬಿಲ್ಲುಗಳಿಗೆ ವಿಳಂಬ ಮಾಡದೆ ಬಿಡುಗಡೆ ಮಾಡುವುದು, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯಗಳು ಇಂಟರ್ನೆಟ್ ಮತ್ತು ವಿದ್ಯುತ್ ಬಿಲ್ಲುಗಳನ್ನು ಪಾವತಿಸುವಂತೆ ಹಾಗೂ ೨:೧ ಅನುಪಾತದಲ್ಲಿ ಹಣ ಮಂಜೂರು ಮಾಡಿ ಲ್ಯಾಬ್ ರಾಸಾನಿಕಗಳು ಉಪಬೋಗ್ಯಗಳನ್ನು ಒದಗಿಸಿಕೊಳ್ಳುವಂತೆ ಮಾಡುವುದು.
ಕಾಲೇಜಿನ ಹಳೆಯ ಮುಖ್ಯ ಶೈಕ್ಷಣಿಕ ಕಟ್ಟಡದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದು, ಪ್ರಸ್ತುತ ಕಾಲೇಜು ತನ್ನ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದು, ೨೫ ತರಗತಿ ಕೊಠಡಿಗಳ ನೂತನ ಉಪನ್ಯಾಸ ಸಂಕೀರ್ಣ ಮತ್ತು ಆಡಳಿತ ಭವನ ನಿರ್ಮಾಣ ಮಾಡುವುದು.
ಕಾಲೇಜಿನಿಂದ ನಿರ್ದಿಷ್ಟ ದೂರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಹೊಸ ಪುರುಷರ ವಸತಿ ನಿಲಯದ ಕಟ್ಟಡ ನಿರ್ಮಾಣ ಮಾಡುವುದು, ಕನಿಷ್ಟ ಸಾವಿರ ಆಸನಗಳುಳ್ಳ ಸುಸಜ್ಜಿತ ಹೊಸ ಸಭಾಂಗಣದ ನಿರ್ಮಾಣ ಮಾಡುವುದು, ಕಾಲೇಜಿನ ಪ್ರಯೋಗಾಲಯಗಳು, ಕಚೇರಿ ಮತ್ತು ಗ್ರಂಥಾಲಯದ ಸೈಬರ್ ಲ್ಯಾಬಿಗೆ ಅತ್ಯವಿರುವ ೨೫೦ ಕಂಪ್ಯೂಟರ್ಗಳನ್ನು ಒದಗಿಸುವುದು, ಎಲ್ಲಾ ತರಗತಿಗಳನ್ನು ಒದಗಿಸುವುದು. ಎಲ್ಲಾ ತರಗತಿಗಳ ಕೊಠಡಿಗಳಿಗೆ ಪ್ರೊಜೆಕ್ಟರ್ ಮತ್ತು ಇಂಟರ್ನೆಟ್ ಸೇರಿದಂತೆ ಐಸಿಟಿ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಇರುವ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಿ, ನೂತನ ಕೊಡಗು ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ಕಾಲೇಜಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಗಮನಿಸುತ್ತಿರುವ ವಿದ್ಯಾರ್ಥಿಗಳು ಬೇರೆ ವಿಶ್ವವಿದ್ಯಾಲಯಗಳ ಕಡೆ ಮುಖ ಮಾಡದಂತೆ ಸ್ನಾತಕೋತ್ತರ ವಿಭಾಗಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕು.
- ಬೊಳ್ಳಜಿರ ಬಿ. ಅಯ್ಯಪ್ಪ, ಮಡಿಕೇರಿ